ADVERTISEMENT

ನಕಲಿ ಸಹಿ ಸುಳಿಗೆ ಸಿಬಿಐ ಕಾನೂನು ಅಧಿಕಾರಿ

ತನ್ನದೇ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ತನಿಖಾ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 17:10 IST
Last Updated 13 ನವೆಂಬರ್ 2018, 17:10 IST

ನವದೆಹಲಿ: ಹಿರಿಯ ಅಧಿಕಾರಿಗಳ ಬೀದಿ ಜಗಳದಿಂದ ಈಗಾಗಲೇ ಮುಜುಗರಕ್ಕೀಡಾಗಿರುವ ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐ ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮುಜುಗರದ ಪ್ರಸಂಗ ಎದುರಿಸುವಂತಾಗಿದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಂಸ್ಥೆಗೆ ಸಲಹೆ ನೀಡಬೇಕಿದ್ದ ಸಿಬಿಐನ ಕಾನೂನು ಸಲಹಾ ಅಧಿಕಾರಿಯೇ ಹಿರಿಯ ಅಧಿಕಾರಿಗಳ ಸಹಿ ನಕಲು ಮಾಡಿ ಸಿಲುಕಿ ಬಿದ್ದಿದ್ದಾರೆ.

ದೆಹಲಿಯಲ್ಲಿರುವ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಪ್ರಧಾನ ಕಚೇರಿಯಲ್ಲಿ ಉಪ ಕಾನೂನು ಸಲಹೆಗಾರರಾಗಿರುವ ಬೀನಾ ರೈಝಾದಾ ವಿರುದ್ಧ ವಂಚನೆ, ನಕಲಿ ಸಹಿ ಮತ್ತು ದಾಖಲೆ ತಿರುಚಿದ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಾಥಮಿಕ ತನಿಖೆಯ ನಂತರ ಸಿಬಿಐ ತನ್ನ ಮಹಿಳಾ ಅಧಿಕಾರಿ ವಿರುದ್ಧ ಸೋಮವಾರ ನವದೆಹಲಿಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

2014, 2015 ಮತ್ತು 2016 ಈ ಮೂರು ವರ್ಷಗಳ ಉದ್ಯೋಗ ಮೌಲ್ಯಮಾಪನ ವರದಿಯಲ್ಲಿ ಪಟ್ನಾದ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಐಪಿಎಸ್‌ ಅಧಿಕಾರಿಯಾಗಿದ್ದ ವಿ.ಕೆ. ಸಿಂಗ್‌ ಅವರ ಸಹಿಯನ್ನು ಬೀನಾ ನಕಲು ಮಾಡಿದ್ದರು.

ವಾರ್ಷಿಕ ಉದ್ಯೋಗ ಮೌಲ್ಯಮಾಪನ ವರದಿಯಲ್ಲಿರುವ ಸಹಿ ತಮ್ಮ ಸಹಿಯನ್ನೇ ಹೋಲುತ್ತದೆ. ಆದರೆ, ಅದು ತಮ್ಮದಲ್ಲ ಎಂದು ಸಿಂಗ್‌ ತನಿಖೆ ವೇಳೆ ತಿಳಿಸಿದ್ದರು.

ಬೀನಾ ರೈಝಾದಾ ಅವರ ಮೂರು ವರ್ಷಗಳ ಸಾಧನೆಗೆ ಅತ್ಯುತ್ತಮ ಅಂಕ ನೀಡಲಾಗಿತ್ತು. 90 ದಿನ ಕೆಲಸಕ್ಕೆ ಗೈರು ಹಾಜರಾಗಿದ್ದ ಬೀನಾ ಪರ ವರದಿ ನೀಡುವುದು ಸಾಧ್ಯವೇ ಇಲ್ಲ ಎಂದು ಸಿಂಗ್‌ ಹೇಳಿದ್ದರು. ಮೇಲಾಗಿ ಬೀನಾ ರೈಝಾದಾ ಎಂದೂ ತಮ್ಮ ಅಡಿ ಕೆಲಸ ಮಾಡಿಲ್ಲ. ಹೀಗಾಗಿ ಅವರ ಮೌಲ್ಯಮಾಪನ ಮಾಡುವ ಅಧಿಕಾರ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.