ಕೊಚ್ಚಿ: ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೇರಳದ ಖ್ಯಾತ ವ್ಯಂಗ್ಯಚಿತ್ರಕಾರ ಸಿ.ಜೆ.ಯೇಸುದಾಸನ್(83) ಅವರು ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಎರ್ನಾಕುಲಂ ಪ್ರೆಸ್ ಕ್ಲಬ್ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ರಾಜಕೀಯ ವ್ಯಂಗ್ಯ ಚಿತ್ರಗಳಿಂದ ಜನಪ್ರಿಯರಾಗಿದ್ದ ಯೇಸುದಾಸನ್ ಅವರು, ಒಂದು ವಾರದ ಹಿಂದೆ ಕೋವಿಡ್ ನಿಂದ ಚೇತರಿಸಿಕೊಂಡಿದ್ದರು. ಆದರೆ ಕೋವಿಡ್ ನಂತರ ಉಂಟಾದ ಆರೋಗ್ಯ ಸಮಸ್ಯೆಗಳಿಂದಾಗಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮುಂಜಾನೆ 3.45 ಕ್ಕೆ ಅವರು ಮೃತಪಟ್ಟರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ.
ಅಲಪ್ಪುಳ ಜಿಲ್ಲೆಯ ಭರೈಕ್ಕಾವುನಲ್ಲಿ 1938ರಲ್ಲಿ ಜನಿಸಿದ ಯೇಸುದಾಸನ್, ದೀರ್ಘಕಾಲ ‘ಮಲಯಾಳಂ ಮನೋರಮಾ' ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.