ADVERTISEMENT

ಮೇಘಾಲಯದ ಗಣಿಯಲ್ಲಿ ನುಗ್ಗಿರುವ ನೀರು: ಸಾವಿನ ದವಡೆಯಲ್ಲಿ 15 ಕಾರ್ಮಿಕರು

ಅತ್ಯಾಧುನಿಕ ಪಂಪ್‌ಸೆಟ್‌ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 19:59 IST
Last Updated 26 ಡಿಸೆಂಬರ್ 2018, 19:59 IST
ಕಲ್ಲಿದ್ದಲು ಗಣಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ --ರಾಯಿಟರ್ಸ್‌ ಚಿತ್ರ
ಕಲ್ಲಿದ್ದಲು ಗಣಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ --ರಾಯಿಟರ್ಸ್‌ ಚಿತ್ರ   

ಗುವಾಹಟಿ/ನವದೆಹಲಿ: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರು ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದೆ.

ಪೂರ್ವ ಜೈಂಟಿಯಾ ಹಿಲ್ಸ್‌ ಜಿಲ್ಲೆಯ ಲುಂಥಾರಿ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಡಿ.13ರಂದು ಈ ಕಾರ್ಮಿಕರು ಸಿಲುಕಿದ್ದಾರೆ.

‘ಲಿಟೀನ್‌’ ನದಿ ನೀರು ಗಣಿ ಒಳಗೆ ನುಗ್ಗಿರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಜೀವಸಹಿತ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ನೀರನ್ನು ಹೊರಗೆ ಹಾಕಲು ಅಧಿಕ ಸಾಮರ್ಥ್ಯದ ಪಂಪ್‌ಸೆಟ್‌ಗಳು ಲಭ್ಯವಿಲ್ಲ. ರಕ್ಷಣಾ ಕಾರ್ಯಕ್ಕೆ ಇದೇ ಪ್ರಮುಖ ಕೊರತೆಯಾಗಿದೆ.

ADVERTISEMENT

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) 100 ತಜ್ಞರ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದೆ. ಆದರೆ, ಅತ್ಯಾಧುನಿಕ ಉಪಕರಣಗಳು ಲಭ್ಯವಾಗದೇ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ’ಎಂದು ಎನ್‌ಡಿಆರ್‌ಎಫ್‌ ಕಮಾಂಡಂಟ್‌ ಎಸ್‌.ಕೆ. ಶಾಸ್ತ್ರಿ ತಿಳಿಸಿದ್ದಾರೆ.

‘ಗಣಿ ಹಳೆಯದಾಗಿದ್ದು, ಅಕ್ರಮವಾಗಿದೆ. ಸಣ್ಣದಾಗಿ ಸುರಂಗ ತೋಡಿ ಗಣಿಗಾರಿಕೆ ಮಾಡಲಾಗುತ್ತಿದೆ. ಬಿದಿರಿನ ಏಣಿ ಮೂಲಕ ಮಕ್ಕಳು ಸೇರಿದಂತೆ ಕಾರ್ಮಿಕರು ನೂರಾರು ಅಡಿ ಕೆಳಗಿಳಿದು ಕಲ್ಲಿದ್ದಲು ಅಗೆಯುತ್ತಾರೆ. ಇದರಿಂದ ಅನಾಹುತಗಳು ಸಂಭವಿಸಿವೆ’ ಎಂದರು.

**

‘ದೇವರ ದಯೆ, ಪವಾಡದಿಂದ ಕಾರ್ಮಿಕರು ಬದುಕಬಹುದು
- ಕ್ರ್ಯಿಮನ್‌ ಶ್ಯಾಲ್ಲಾ , ಮೇಘಾಲಯದ ವಿಪತ್ತು ನಿರ್ವಹಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.