ADVERTISEMENT

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ | ಜಾಮೀನು: ‘ಸುಪ್ರೀಂ’ಗೆ ಮತ್ತೊಂದು ಮೇಲ್ಮನವಿ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ; ಮೃತ ರೈತರ ಕುಟುಂಬದಿಂದ ಅರ್ಜಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 17:45 IST
Last Updated 21 ಫೆಬ್ರುವರಿ 2022, 17:45 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್‌ ಮಿಶ್ರಾ ಅವರಿಗೆ ಜಾಮೀನು ನೀಡಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮೃತ ರೈತರ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಲಖನೌ ಹೈಕೋರ್ಟ್‌ನ ಅಲಹಾಬಾದ್‌ ಪೀಠ ಫೆಬ್ರುವರಿ 10ರಂದು ಆರೋಪಿಗೆ ಜಾಮೀನು ನೀಡಿರುವುದು ಕಾನೂನಿನ ಪ್ರಕಾರ ಸಮರ್ಥನೀಯವಲ್ಲ ಎಂದು ರೈತರ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಪ್ರಶಾಂತ ಭೂಷಣ್‌ ತಿಳಿಸಿದ್ದಾರೆ.

2022ರ ಜನವರಿ 18ರಂದು ನಡೆದ ವಿಚಾರಣೆ ವೇಳೆ ಹೈಕೋರ್ಟ್‌ಗೆ ಸತ್ಯಾಂಶ ತಿಳಿಸಲು ಬಯಸಿದ್ದ ಸಂತ್ರಸ್ತ ಕುಟುಂಬದ ಸದಸ್ಯರನ್ನು ತಡೆಯಲಾಗಿದೆ. ಈ ಸಂಬಂಧ ನ್ಯಾಯಾಲಯದ ಸಿಬ್ಬಂದಿಯನ್ನು ಸಂಪರ್ಕಿಸಲು ಪದೇ ಪದೇ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಲ್ಲದೆ, ಅರ್ಜಿಗಳ ಪರಿಣಾಮಕಾರಿ ವಿಚಾರಣೆ ನಡೆಸದೆ ತಿರಸ್ಕರಿಸಲಾಗಿದೆ ಎಂದೂ ದೂರಲಾಗಿದೆ.

ADVERTISEMENT

ಆರೋಪಿ ಮತ್ತು ಆತನ ತಂದೆಯ ಪಕ್ಷವೇ ಅಧಿಕಾರದಲ್ಲಿ ಇರುವುದರಿಂದ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರವು ಜಾಮೀನು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರುವುದರಿಂದ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಸಂತ್ರಸ್ತ ಕುಟುಂಬ ಸದಸ್ಯರಾದ ಜಗಜೀತ್ ಸಿಂಗ್ ಮತ್ತಿತರರು ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಅಪರಾಧದ ಸ್ವರೂಪವನ್ನು ಅರ್ಥೈಸಿಕೊಳ್ಳುವಲ್ಲಿ ಹೈಕೋರ್ಟ್ ವಿಫಲವಾಗಿದೆ. ಜಾಮೀನು ಮಂಜೂರು ಮಾಡಿರುವುದರಿಂದ ಇಂಥ ಅಪರಾಧ ಪ್ರಕರಣಗಳು ಪುನರಾವರ್ತಿಸುವ ಸಾಧ್ಯತೆ ಇದೆ. ಅಲ್ಲದೆ, ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಆರೋಪಿಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ವಕೀಲರಾದ ಸಿ.ಎಸ್. ಪಾಂಡಾ ಹಾಗೂ ಶಿವಕುಮಾರ ತ್ರಿಪಾಠಿ ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.