ADVERTISEMENT

ಸಾಧುಗಳ ಅಖಾಡ ತೊರೆದು ಹೊರ ಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

ಮಮತಾ ಕುಲಕರ್ಣಿ ಅವರು ಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ನಾಗಾ ಸಾಧುಗಳ ಮಹಾಂಡಲೇಶ್ವರ ಕಿನ್ನಾರಾ ಅಖಾಡದ ಸಂಚಾಲಕಿಯಾಗಿದ್ದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2025, 11:38 IST
Last Updated 10 ಫೆಬ್ರುವರಿ 2025, 11:38 IST
   

ಬೆಂಗಳೂರು: ಬಾಲಿವುಡ್‌ನ ಮಾಜಿ ನಟಿ, ರೂಪದರ್ಶಿ ಮಮತಾ ಕುಲಕರ್ಣಿ ಅವರು ಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ನಾಗಾ ಸಾಧುಗಳ ಮಹಾಂಡಲೇಶ್ವರ ಕಿನ್ನಾರಾ ಅಖಾಡದ ಸಂಚಾಲಕಿಯಾಗಿದ್ದರು.

ಇದೀಗ ಮತ್ತೆ ಸುದ್ದಿಯಾಗಿರುವ ಮಮತಾ ಅವರು ತಾವು ಮಹಾಂಡಲೇಶ್ವರ ಕಿನ್ನಾರಾ ಅಖಾಡವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಎಕ್ಸ್‌ನಲ್ಲಿ ಮಮತಾ ಅವರು ಮಾತನಾಡಿರುವ ವಿಡಿಯೊ ಹಂಚಿಕೊಂಡಿದೆ.

ನಾನು ಮಹಾಂಡಲೇಶ್ವರ ಕಿನ್ನಾರಾ ಅಖಾಡದ ಹುದ್ದೆಯಿಂದ ನಿರ್ಗಮಿಸುವೆ. ಬಾಲ್ಯದಿಂದಲೂ ಸಾಧ್ವಿಯಾಗಿದ್ದೆ. ಇನ್ನು ಮುಂದೆಯೂ ಸಾಧ್ವಿಯಾಗಿರುವೆ ಎಂದು ಹೇಳಿದ್ದಾರೆ.

ADVERTISEMENT

52 ವರ್ಷ ವಯಸ್ಸಿನ ಅವರು ಮಹಾಂಡಲೇಶ್ವರ ಕಿನ್ನಾರಾ ಅಖಾಡದಲ್ಲಿ ‘ಯಾಮೈ ಮಮತಾ ನಂದಗಿರಿ’ ಹೆಸರಿನಿಂದ ಗುರುತಿಸಿಕೊಂಡು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಓಡಾಡಿಕೊಂಡಿದ್ದಾರೆ. ಅಧ್ಯಾತ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಮತಾ ಅವರಿಗೆ ಕಿನ್ನಾರಾ ಅಖಾಡದಲ್ಲಿ ಸ್ಥಾನ ನೀಡಿದ್ದಕ್ಕೆ ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ಹೆಸರಿನಲ್ಲಿ ವಿವಾದವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸ್ಥಾನ ತೊರೆದು ಕೇವಲ ಸಾಧ್ವಿ ಆಗಿ ಮುಂದುವರೆಯಲಿದ್ದಾರೆ.

ಚಿತ್ರರಂಗದಿಂದ ನಿರ್ಗಮಿಸಿದ್ದ ಅವರು ಕೆಲ ತಿಂಗಳ ಹಿಂದಷ್ಟೇ, ಮತ್ತೆ ಸುಮಾರು 25 ವರ್ಷಗಳ ಬಳಿಕ ಮುಂಬೈಗೆ ಮರಳಿದ್ದರು.

‘ಮಮತಾ ಕುಲಕರ್ಣಿ ನನ್ನ ಜೊತೆ 10 ವರ್ಷದಿಂದ ಸಂಪರ್ಕದಲ್ಲಿದ್ದಾರೆ. ಸನಾತನ ಧರ್ಮಕ್ಕೆ ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ’ ಎಂದು ಮಹಾಂಡಲೇಶ್ವರ ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ಹೇಳಿದ್ದರು.

ವಿಕಿ ಗೋಸ್ವಾಮಿ ಜೊತೆ ವಿವಾಹ ಆಗಿದ್ದ ಅವರು, ಕೆಲ ವರ್ಷ ಆಫ್ರಿಕಾದಲ್ಲಿ ವಾಸವಿದ್ದರು. ಮಾದಕ ವಸ್ತು ಪ್ರಕರಣ ಸಂಬಂಧ ಅಮೆರಿಕದ ತನಿಖಾ ಸಂಸ್ಥೆಯ ತನಿಖೆಗೂ ಒಳಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.