ADVERTISEMENT

ಇಂದು ರೈತರು–ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ: ರೈತರ 2 ಬೇಡಿಕೆಗಳು ಯಾವುವು?

ರೈತರ ಮುಷ್ಕರ 40ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:17 IST
Last Updated 4 ಜನವರಿ 2021, 3:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದೆ.

ಈಗಾಗಲೇ ಕೇಂದ್ರ ಸರ್ಕಾರ 6 ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಿ ವಿಫಲವಾಗಿದ್ದು ಇಂದು 7ನೇ ಸುತ್ತಿನ ಮಾತುಕತೆ ನಡೆಸಲಿದೆ. ಪ್ರತಿಭಟನಾನಿರತ ರೈತರ ಪರವಾಗಿ ವಿವಿಧ ರೈತಪರ ಹಾಗೂ ಕಾರ್ಮಿಕ ಸಂಘಟನೆಗಳ 40 ಮುಖಂಡರು ಹಾಗೂ ಸರ್ಕಾರದ ಪರವಾಗಿಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌, ಸಚಿವರಾದಪಿಯೂಶ್‌ ಗೋಯಲ್‌, ಸೋಮ್‌ ಪ್ರಕಾಶ್‌ ಮಾತುಕತೆ ನಡೆಸುವರು

ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಗಣರಾಜ್ಯೋತ್ಸವದಂದು (ಜ.26) ದೆಹಲಿಯಲ್ಲಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸುತ್ತೇವೆ ಎಂದು ರೈತರು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರು ಸರ್ಕಾರದ ಮುಂದೆ ಪ್ರಮುಖ ಎರಡು ಕಾರ್ಯಸೂಚಿಗಳನ್ನು ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸಬೇಕು ಅಥವಾ ರೈತರನ್ನು ಇಲ್ಲಿಂದ ಬಲವಂತವಾಗಿ ಖಾಲಿ ಮಾಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ

ADVERTISEMENT

ರೈತರ 2 ಪ್ರಮುಖ ಬೇಡಿಕೆಗಳು

1) ಹೊಸ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು.
2) ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಶಾಸನಾತ್ಮಕ ರಕ್ಷಣೆ ನೀಡಬೇಕು

ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ಸಾವಿರಾರು ರೈತರು ದೆಹಲಿ ಚಲೋ ಯಾತ್ರೆ ಆರಂಭಿಸಿ ಇಂದಿಗೆ (ಜ. 04) 40 ದಿನಗಳಾದವು.

ದೆಹಲಿ ಚಲೋ ನಡೆಸಬೇಕಿದ್ದ ಅವರನ್ನು ಸರ್ಕಾರವು ರಾಜಧಾನಿಯ ಒಳಗೇ ಬಿಟ್ಟುಕೊಡಲಿಲ್ಲ. ಅವರು ದೆಹಲಿಯ ಗಡಿಗಳ ಹೊರಗೆ, ಥರಗುಟ್ಟುವ ಚಳಿಯಲ್ಲಿ ಬೀಡುಬಿಟ್ಟಿದ್ದಾರೆ. ಕೇಂದ್ರ ಸರ್ಕಾರವು ‘ಕೃಷಿ ಕ್ಷೇತ್ರದ ಸುಧಾರಣೆ’ಗಾಗಿ ಜಾರಿಗೆ ತಂದ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ.

ಸರ್ಕಾರ ಕೂಡ ಪಟ್ಟು ಸಡಿಲಿಸದೇ ಹಲವು ಸುತ್ತುಗಳ ಮಾತುಕತೆ ನಡೆಸುತ್ತಿದೆ. ರೈತರು ಸಹ ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.