ADVERTISEMENT

ಪ್ರತಿ ಮನೆಯಿಂದ ಓರ್ವ ರೈತನನ್ನು ದೆಹಲಿಗೆ ಕಳುಹಿಸಲು ಯೋಗೇಂದ್ರ ಮನವಿ

ಏಜೆನ್ಸೀಸ್
Published 29 ಜನವರಿ 2021, 15:03 IST
Last Updated 29 ಜನವರಿ 2021, 15:03 IST
ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್   

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೇಶದ ಪ್ರತಿ ಕುಟುಂಬದ ಓರ್ವ ರೈತನನ್ನು ದೆಹಲಿಗೆ ಕಳುಹಿಸುವಂತೆ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಶುಕ್ರವಾರ ಕರೆ ನೀಡಿದ್ದಾರೆ.

ದೆಹಲಿ-ಗಾಜಿಯಾಬಾದ್ ಗಡಿಯಲ್ಲಿ ಮಾತನಾಡಿದ ಅವರು, ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಸುರಿಸಿರುವ ಕಣ್ಣೀರು ರೈತರ ಮೇಲಿದ್ದ ಎಲ್ಲ ಕಳಂಕವನ್ನು ತೊಳೆದು ಹಾಕಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದನ್ನು ಗಮನವಿಟ್ಟು ಕೇಳಿರಿ. ಅವಮಾನ ಹಾಗೂ ಅಪಖ್ಯಾತಿಗೊಳಗಾಗಿ ರೈತರು ಚಳವಳಿಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ADVERTISEMENT

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿಯಲ್ಲಿ (ಯುಎಪಿಎ) ಪ್ರಕರಣ ದಾಖಲಿಸಿ ನಮ್ಮನ್ನು ಶಿಕ್ಷಿಸಲಾಗುವುದು ಎಂದು ಹೇಳುತ್ತಾರೆ. ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವ ಅಪರಾಧಿಗೆ ಹೊರಡಿಸಲಾಗುವ ತರಹನೇ ನಮ್ಮ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ದೆಹಲಿ ಪೊಲೀಸರಿಗೆ ನಾನು ಹೇಳುವ ವಿಷಯ ಏನೆಂದರೆನೀವು ಲುಕ್‌ಔಟ್ ನೋಟಿಸ್ ಜಾರಿ ಮಾಡುವ ಅಗತ್ಯವಿಲ್ಲ. ನಾವು ಇಲ್ಲಿಯೇ ನಿಮ್ಮ ಎದುರುಗಡೆ ನಿಂತಿದ್ದೇವೆ. ಯಾವ ರಾಕೇಶ್ ಟಿಕಾಯತ್ ಕೂಡಾ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಿಲ್ಲ ಎಂದು ಪ್ರತ್ಯಾರೋಪ ಮಾಡಿದರು.

ಪ್ರತಿಭಟನಾ ನಿರತ ರೈತರು ಈ ಜಾಗ ಬಿಟ್ಟು ಕದಲುವುದಿಲ್ಲ ಎಂಬುದನ್ನು ಅವರು ಪ್ರತಿಪಾದಿಸಿದರು. ಏತನ್ಮಧ್ಯೆ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್ ವೇಳೆ ನಡೆದ ಹಿಂಸಾಚಾರದಲ್ಲಿ ರೈತರ ಕೈವಾಡವಿಲ್ಲ ಎಂಬುದನ್ನು ಪುನರುಚ್ಛರಿಸಿದರು.

ರೈತರನ್ನು ಬೆಂಬಲಿಸಲು ಬಯಸುವ ಎಲ್ಲರನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಭಟನೆಯಲ್ಲಿ ಭಾಗವಹಿಸಲು ದೇಶದ ಪ್ರತಿ ಕುಟುಂಬವು ಓರ್ವ ರೈತರನ್ನು ಇಲ್ಲಿಗೆ ಕಳಹಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.