ADVERTISEMENT

ಡಿ. 8ಕ್ಕೆ ಭಾರತ ಬಂದ್‌ಗೆ ರೈತರ ಕರೆ: ನಾಳೆ ಮತ್ತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:00 IST
Last Updated 4 ಡಿಸೆಂಬರ್ 2020, 13:00 IST
ನವದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ
ನವದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ   

ನವದೆಹಲಿ: ಹೊಸ ಕೃಷಿ ಮಸೂದೆಗಳ ತಿದ್ದುಪಡಿ ಕುರಿತಂತೆ ಸಲಹೆಗಳನ್ನ ಪಡೆಯುವುದಾಗಿ ನಿನ್ನೆ ಕೇಂದ್ರ ಸರ್ಕಾರ ಹೇಳಿದ್ದರೂ ಸಹ ಪಟ್ಟು ಬಿಡದ ರೈತ ಸಂಘಟನೆಗಳು ಹೊಸ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಪ್ರತಿಭಟನೆ ಮುಂದುವರೆಸಿವೆ.

ಈ ಮಧ್ಯೆ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿದ್ದು, ಡಿ. 8ಕ್ಕೆ ಭಾರತ ಬಂದ್‌ಗೆ ರೈತರು ಕರೆ ನೀಡಿದ್ದಾರೆ. ಸಭೆ ಬಳಿಕ ರೈತ ಮುಖಂಡ ಲಡಕ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತ, 7 ಗಂಟೆಗಳ ಮ್ಯಾರಥಾನ್ ಮಾತುಕತೆ ಬಳಿಕ ನಾಳೆ ಮತ್ತೆ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಸಚಿವರ ಸಮಿತಿ ಜೊತೆ ಮಾತುಕತೆ ನಡೆಸಲು 40 ರೈತ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ.

ಕಳೆದ 9 ದಿನಗಳಿಂದ ರಾಜಧಾನಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಇದೀಗ ಮತ್ತಷ್ಟು ಸಂಘಟನೆಗಳು ಬೆಂಬಲ ಸೂಚಿಸಿವೆ.

ADVERTISEMENT

ರೈತರು ರಾಜಧಾನಿಗೆ ತೆರಳದಂತೆ ತಡೆಯದ ಹರಿಯಾಣ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಹರಿಯಾಣ ವಿಪಕ್ಷ ನಾಯಕ ಬಿ.ಎಸ್. ಹೂಡಾ ಟೀಕಿಸಿದ್ದಾರೆ. ರೈತರು ದೆಹಲಿ ಪ್ರವೇಶಿಸುವ ಸಂದರ್ಭ ಹರಿಯಾಣ ಸರ್ಕಾರ ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ, ಸರ್ಕಾರ ಕೂಡಲೇ ಹೊಸ ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕು ಮತ್ತು ರೈತರನ್ನ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಒಂದೊಮ್ಮೆ ಸರ್ಕಾರ, ರೈತರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಹೋದಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನ ಹಿಂದಿರುಗಿಸುವುದಾಗಿ ಭಾರತದ ಮಾಜಿ ಬಾಕ್ಸಿಂಗ್ ಕೋಚ್ ಗುರ್ಬಾಕ್ಸ್ ಸಿಂಗ್ ಸಂಧು ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಪ್ರತಿಭಟನಾ ನಿರತ ರೈತರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.