ಶಂಭು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 101 ರೈತರ ಗುಂಪು ಪಂಜಾಬ್–ಹರಿಯಾಣದ ಶಂಭು ಗಡಿಯಿಂದ ದೆಹಲಿಯತ್ತ ಭಾನುವಾರ ಮಧ್ಯಾಹ್ನ ಪುನಃ ಪಾದಯಾತ್ರೆಯನ್ನು ಆರಂಭಿಸಿತ್ತು. ಆದರೆ ರೈತರು ಕೆಲವೇ ಮೀಟರ್ ದೂರ ಸಾಗಿದ ನಂತರ ಪೊಲೀಸರು ಬಹುಸ್ತರದ ಬ್ಯಾರಿಕೇಡ್‌ಗಳನ್ನು ಇಟ್ಟು ರೈತರನ್ನು ತಡೆದರು.
ಬ್ಯಾರಿಕೇಡ್‌ಗಳತ್ತ ಧಾವಿಸುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಪ್ರಯೋಗಿಸಿದರು.
ರಾಷ್ಟ್ರರಾಜಧಾನಿ ಆಡಳಿತದಿಂದ ಅನುಮತಿ ಪಡೆದ ನಂತರವಷ್ಟೇ ರೈತರು ‘ದೆಹಲಿ ಚಲೋ’ ನಡೆಸಬಹುದು ಎಂದು ಅಂಬಾಲಾ ಪೊಲೀಸರು ಇದಕ್ಕೂ ಮುನ್ನ ತಿಳಿಸಿದ್ದರು.
‘ಪಾದಯಾತ್ರೆ ಆರಂಭಿಸಿದ್ದ ರೈತರ ಬಳಿ ಅನುಮತಿ ಪತ್ರ ಕೇಳಿದೆವು. ನಮ್ಮ ಬಳಿ ಇರುವ 101 ರೈತರ ಹೆಸರಿನ ಪಟ್ಟಿಯಲ್ಲಿ ಇವರುಗಳ ಹೆಸರು ಇರಲಿಲ್ಲ. ಗುರುತಿನ ಚೀಟಿಯನ್ನೂ ಅವರು ನೀಡಲಿಲ್ಲ. ಗಲಭೆ ಉಂಟುಮಾಡಲು ಅವರು ಸೇರಿದ್ದರು’ ಎಂದು ಹರಿಯಾಣದ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದರು.
ರೈತರೊಬ್ಬರು ಪ್ರತಿಕ್ರಿಯಿಸಿ, ‘ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲ ಎಂದು ಪೊಲೀಸರು ಹೇಳಿದರು. ಅವರ ಬಳಿ ಯಾವ ಪಟ್ಟಿ ಇದೆಯೋ ನಮಗೆ ಗೊತ್ತಿಲ್ಲ. ನಮ್ಮ ಗುರುತಿನ ಚೀಟಿ ನೀಡಿದ ನಂತರ ಪಾದಯಾತ್ರೆಗೆ ಅವಕಾಶ ನೀಡುತ್ತೀರಾ ಎಂದು ಕೇಳಿದರೆ, ಅನುಮತಿ ಪತ್ರ ತೋರಿಸಬೇಕು ಎಂದು ಹೇಳಿದರು’ ಎಂದು ತಿಳಿಸಿದರು.
ಇದೇ ವಿಚಾರವಾಗಿ ಪೊಲೀಸರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು. ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿದರು.
ಅಶ್ರುವಾಯು ಪ್ರಯೋಗಿಸಿದ ನಂತರ ಕೆಲವು ರೈತರು ಹಿಂದಕ್ಕೆ ಸರಿದರು, ಮತ್ತೆ ಕೆಲವರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡರು, ಮತ್ತೆ ಕೆಲವರು ರಕ್ಷಣಾತ್ಮಕ ಕನ್ನಡಕ ಧರಿಸಿದರು, ಇನ್ನೊಂದಿಷ್ಟು ಜನ ಒದ್ದೆಯಾದ ಸೆಣಬಿನ ಚೀಲ ಅಡ್ಡ ಹಿಡಿದು ರಕ್ಷಿಸಿಕೊಳ್ಳಲು ಯತ್ನಿಸಿದರು.
ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಜಾರಿ ಮಾಡಿದೆ. ಹೀಗಾಗಿ ಪಾದಯಾತ್ರೆ, ಪ್ರತಿಭಟನೆ ನಡೆಸಬೇಡಿ ಎಂದು ಹರಿಯಾಣ ಪೊಲೀಸರು ರೈತರಿಗೆ ಹೇಳಿದ್ದರು.
ಹರಿಯಾಣ ಸರ್ಕಾರವು ಅಂಬಾಲಾ ಜಿಲ್ಲೆಯ 11 ಗ್ರಾಮಗಳಲ್ಲಿ ಡಿಸೆಂಬರ್ 6ರಿಂದ 9ರವರೆಗೆ ಮೊಬೈಲ್ ಇಂಟರ್‌ನೆಟ್ ಮತ್ತು ಎಸ್‌ಎಂಎಸ್ ಸೇವೆಯನ್ನು ಸ್ಥಗಿತ ಮಾಡಿದೆ.
300 ದಿನ ಪೂರ್ಣ:
ಪ್ರತಿಭಟನೆ ಆರಂಭಿಸಿ ಭಾನುವಾರಕ್ಕೆ 300 ದಿನಗಳು ಪೂರ್ಣಗೊಂಡಿವೆ ಎಂದು ಪಂಜಾಬ್‌ನ ರೈತ ನಾಯಕ ಸರವಣ ಸಿಂಗ್ ಪಂಢೇರ್ ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸುತ್ತಿದ್ದ ಮಾಧ್ಯಮದವರನ್ನು ಪಂಜಾಬ್ ಪೊಲೀಸರು ತಡೆದಿದ್ದಾರೆ. ಪಂಜಾಬ್ ಪೊಲೀಸರಿಗೆ ಈ ಬಗ್ಗೆ ಹರಿಯಾಣ ಪೊಲೀಸರು ಸೂಚನೆ ನೀಡಿದ್ದರು ಎಂದು ಪಂಢೇರ್ ಅವರು ಆರೋಪಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು, ಶಂಭು ಹಾಗೂ ಖನೌರಿ ಗಡಿಯಲ್ಲಿ ಕಳೆದ ಫೆಬ್ರುವರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಬೇಡಿಕೆಗಳೇನು?
*ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ
*ಸಾಲ ಮನ್ನಾ *ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ
*ವಿದ್ಯುತ್ ಶುಲ್ಕ ಹೆಚ್ಚಿಸಬಾರದು
*ರೈತರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು
*2021ರ ಲಖೀಂಪುರ ಖೀರಿ ಹಿಂಸಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು
ದೆಹಲಿಗೆ ಟ್ಯಾಕ್ಟರ್ ಮೂಲಕ ರೈತರು ಹೋಗಲು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಪಾದಯಾತ್ರೆ ಮೂಲಕವೂ ಮೆರವಣಿಗೆ ನಡೆಸಲು ಅಡ್ಡಿ ಮಾಡುತ್ತಿರುವುದು ಏಕೆತೇಜ್ವೀರ್ ಸಿಂಗ್ ರೈತ ನಾಯಕ
ಪಾದಯಾತ್ರೆ ನಿಲ್ಲಿಸಿದ ರೈತರು
ಅಶ್ರುವಾಯು ಪ್ರಯೋಗದಿಂದ ಕೆಲವು ರೈತರು ಗಾಯಗೊಂಡ ನಂತರ ಪ್ರತಿಭಟನಕಾರರು ಪಾದಯಾತ್ರೆಯನ್ನು ನಿಲ್ಲಿಸಿದರು. ದಾಳಿಯಲ್ಲಿ ಕನಿಷ್ಠ 8 ರೈತರು ಗಾಯಗೊಂಡಿದ್ದಾರೆ. ಒಬ್ಬರನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. 101 ಮಂದಿ ರೈತರ ಗುಂಪನ್ನು ಪ್ರತಿಭಟನೆಯಿಂದ ವಾಪಸ್ ಕರೆದಿದ್ದೇವೆ ಎಂದು ಪಂಜಾಬ್ ರೈತ ನಾಯಕ ಸರವಣ ಸಿಂಗ್ ಪಢೇರ್ ತಿಳಿಸಿದರು. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಸಭೆ ಬಳಿಕ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ರೈತರ ಮೇಲೆ ಹೂಮಳೆ
ಪಾದಯಾತ್ರೆ ಹೊರಟಿದ್ದ ರೈತರನ್ನು ತಡೆದ ನಂತರ ಹರಿಯಾಣದ ಭದ್ರತಾ ಸಿಬ್ಬಂದಿ ಅವರಿಗೆ ಟೀ ಮತ್ತು ಬಿಸ್ಕತ್ ನೀಡಿದರು. ನಂತರ ಅವರ ಮೇಲೆ ಹೂವಿನ ಮಳೆಗರೆದರು. ಆದರೆ ಪ್ರತಿಭಟನಕಾರರು ಇದನ್ನು ‘ನಾಟಕ’ ಎಂದು ಕರೆದರು. ಬಳಿಕ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.