ADVERTISEMENT

ಕೃಷಿ ಕಾನೂನು: ‘ಸುಪ್ರೀಂ’ ಮೆಟ್ಟಿಲೇರಲು ಪಂಜಾಬ್‌ ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 18:29 IST
Last Updated 28 ಸೆಪ್ಟೆಂಬರ್ 2020, 18:29 IST
ಪಂಜಾಬ್‌ನಲ್ಲಿ ಕೃಷಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಲ್ಗೊಂಡಿದ್ದರು.
ಪಂಜಾಬ್‌ನಲ್ಲಿ ಕೃಷಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಲ್ಗೊಂಡಿದ್ದರು.   

ಖಟ್ಕರ್‌ ಕಲಾಂ (ಪಂಜಾಬ್):ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನೂತನ ಕಾನೂನುಗಳ ವಿರುದ್ಧ ಪಂಜಾಬ್‌ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೋಮವಾರ ತಿಳಿಸಿದರು.

ಖಟ್ಕರ್‌ ಕಲಾಂ ಹಳ್ಳಿಯಲ್ಲಿ ಭಗತ್‌ ಸಿಂಗ್‌ 113ನೇ ಜನ್ಮದಿನಾಚರಣೆ ಅಂಗವಾಗಿ ಸಿಂಗ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌, ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸುನಿಲ್‌ ಜಖಾರ್‌ ಭಗತ್‌ ಸಿಂಗ್‌ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಇದಾದ ನಂತರದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಅಲ್ಲೇ ಧರಣಿ ನಡೆಸಿದರು.

‘ಕೇಂದ್ರ ಸರ್ಕಾರ ರಾಜ್ಯದ ಹಕ್ಕುಗಳನ್ನು ಕಸಿಯುತ್ತಿದೆ. ಕೃಷಿ ಕ್ಷೇತ್ರದ ನೂತನ ಕಾನೂನುಗಳು, ರೈತ ಸಮುದಾಯವನ್ನೇ ನಾಶ ಮಾಡಲಿದೆ. ರಾಷ್ಟ್ರಪತಿ ಅವರು ಈ ಮಸೂದೆಗಳನ್ನು ಅಂಗೀಕರಿಸಿದ್ದಾರೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್‌ಗೆ ಈ ವಿಷಯವನ್ನು ಕೊಂಡೊಯ್ಯಲಿದ್ದೇವೆ. ದೆಹಲಿಯಿಂದ ನಾಳೆ ಇಬ್ಬರು ವಕೀಲರು ಆಗಮಿಸಲಿದ್ದು, ಅವರೊಂದಿಗೆ ಈ ಕುರಿತು ಚರ್ಚಿಸಲಿದ್ದೇವೆ’ ಎಂದು ಸಿಂಗ್‌ ತಿಳಿಸಿದರು.

ADVERTISEMENT

ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿರೋಮಣಿ ಅಕಾಲಿ ದಳದ ನಡೆಯನ್ನು ಟೀಕಿಸಿರುವ ಸಿಂಗ್‌, ‘ಅಕಾಲಿ ದಳ ಪ್ರಸ್ತುತ ಸಂಪೂರ್ಣ ಸೋಲುವ ಸ್ಥಿತಿಯಲ್ಲಿ ಇದೆ. ಈ ಸಂದರ್ಭದಲ್ಲಿ ಕೆಲ ತಂತ್ರಗಳನ್ನು ಅವರು ಮಾಡುತ್ತಿದ್ದಾರೆ. ಇದು ಫಲಿಸುವುದಿಲ್ಲ. ಏಕೆಂದರೆ ಜನರು ನಿಮ್ಮನ್ನು ಮತ್ತೆ ನಂಬುವುದಿಲ್ಲ’ ಎಂದಿದ್ದಾರೆ.

ರೈತರ ಪರವಾಗಿ ಕೋರ್ಟ್‌ ಮೆಟ್ಟಿಲೇರುತ್ತೇವೆ:ತಮಿಳುನಾಡಿನಾದ್ಯಂತವೂಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿದವು. ಕಾನೂನಿನ ವಿರುದ್ಧ ರೈತರ ಪ‍ರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಸಿದ್ಧ. ನಾನೊಬ್ಬ ಬಡ ತಾಯಿಯ ಪುತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದರು. ಇದೀಗ ಇದೇ ಬಡ ತಾಯಿಯ ಮಗ, ಭಾರತದಲ್ಲಿರುವ ಹಲವರನ್ನು ಬಡವರನ್ನಾಗಿ ಮಾಡುತ್ತಿದ್ದಾರೆ’ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್‌ ಟೀಕಿಸಿದ್ದಾರೆ.

ಪ್ರಸ್ತುತ ಮೋದಿ ಸರ್ಕಾರವು ಮಾಡಿರುವ ನಿರ್ಧಾರವನ್ನು ತನ್ನ ಪ್ರಣಾಳಿಕೆಯಲ್ಲೇ ಕಾಂಗ್ರೆಸ್‌ ಉಲ್ಲೇಖಿಸಿತ್ತು. ಇದೀಗ ಕಾಂಗ್ರೆಸ್‌ ತನ್ನ ವರಸೆ ಬದಲಾಯಿಸಿದೆ ಎಂದು ಕೇಂದ್ರ ಸಚಿವಪ್ರಕಾಶ್‌ ಜಾವಡೇಕರ್ ಹೇಳಿದ್ದಾರೆ.

ಎಲ್ಲಿಲ್ಲಿ ಪ್ರತಿಭಟನೆ? ಏನಾಯಿತು?

* ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

* ಗುಜರಾತ್‌ನ ವಿಧಾನಸಭೆ ಕಾಂಪ್ಲೆಕ್ಸ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ರಾಜ್ಯಘಟಕದ ಅಧ್ಯಕ್ಷ ಅಮಿತ್‌ ಚಾವ್ಡ ಸೇರಿದಂತೆ ನೂರಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರ ಬಂಧನ.

* ತೆಲಂಗಾಣದಲ್ಲಿ ಕೃಷಿ ಕಾನೂನಿನ ವಿರುದ್ಧ ಮನವಿ ಸಲ್ಲಿಸಲು ರಾಜಭವನಕ್ಕೆ ತೆರಳುತ್ತಿದ್ದ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ರಾಜ್ಯಪಾಲರ ಭೇಟಿಗೆ ಮುಖಂಡರು ಪೂರ್ವಾನುಮತಿ ಪಡೆದಿರಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.