ADVERTISEMENT

ದೆಹಲಿಯಲ್ಲಿ ರೈತರ ಪ್ರತಿಭಟನೆ ಆರಂಭ; ರಾಜ್ಯದಿಂದ ನೂರಾರು ರೈತರ ದಂಡು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 8:16 IST
Last Updated 29 ನವೆಂಬರ್ 2018, 8:16 IST
ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸಿರುವ ನಾನಾ ಭಾಗಗಳ ರೈತರು
ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸಿರುವ ನಾನಾ ಭಾಗಗಳ ರೈತರು   

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ವಿವಿಧೆಡೆಯಿಂದ ಬಂದಿರುವ ರೈತರು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಗುರುವಾರ ಪ್ರತಿಭಟನೆ ಆರಂಭಿಸಿದರು.

ಪ್ರಧಾನ ಮಂತ್ರಿ ರಾಷ್ಟ್ರೀಯ ಫಸಲ್‌ ಬಿಮಾ ಯೋಜನೆಯಲ್ಲಿರುವ ನ್ಯೂನತೆ ಸರಿಪಡಿಸಬೇಕು, ಸ್ವಾಮಿನಾಥನ್ ವರದಿ ಜಾರಿಗೊಳಿಸುವ‌ ಮೂಲಕ ಆವರ್ತನಿಧಿಗೆ ರಾಜ್ಯ ಸರ್ಕಾರಗಳಿಗೆ ಸೂಕ್ತ ಅನುದಾನ ಮಂಜೂರು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬೆಂಬಲಬೆಲೆ ಯೋಜನೆ ಅಡಿ ಖರೀದಿ ಕೇಂದ್ರಗಳನ್ನು ವರ್ಷವಿಡೀ ತೆರೆಯಬೇಕು. ಈ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ಮನವಿ ಮಾಡಿದರು.

ADVERTISEMENT

ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೆ ಅನುಕೂಲ ಕಲ್ಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಸಾಲ‌ ಮನ್ನಾ ಮಾಡಲು ಕೇಂದ್ರ ಸರ್ಕಾರ ಮನಸು ಮಾಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಬೆಂಬಲ ನೀಡಬೇಕು. ಉದ್ಯಮಿಗಳ ಬೆಂಬಲಕ್ಕೆ ನಿಲ್ಲದೆ ದೇಶದ ರೈತರ ಹಿತ ಕಾಯಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು.

ರಾಜ್ಯ ರೈತ ಸಂಘದಿಂದ ಚಾಮರಸ ಮಾಲಿಪಾಟೀಲ, ಕೋಡಿಹಳ್ಳಿ ಚಂದ್ರಶೇಖರ, ರಾಮಣ್ಣ ಕೆಂಚಳ್ಳಿ, ಮಾಲತೇಶ ಪರಪ್ಪನವರ, ಅಡಿವೆಪ್ಪ ಆಲದಕಟ್ಟಿ,‌ ಶಿವಬಸಪ್ಪ ಗೋವಿ, ಜಯಶಂಕರ ತಿಮ್ಮಯ್ಯನವರ, ವೀರಸಂಗಯ್ಯ ಸೇರಿದಂತೆ ರಾಜ್ಯದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ‌ ನೀಡಿರುವಂತೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು ಇಲ್ಲವಾದರೆ ನಮ್ಮ ಸರಗಕಾರ ರೈತರ ಪರ ಇಲ್ಲ ಎಂದು ಘೋಷಿಸಿ ಎಂದು ರೈತ ಮುಖಂಡ ಕೋಡಿಹಳ್ಳಿ‌ ಚಂದ್ರಶೇಖರ ಆಗ್ರಹಿಸಿದರು.

ರೈತರ ಸಮಸ್ಯೆ‌ ಅರಿತೂ ಮೋದಿ ಸರ್ಕಾರ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಗಾಂಧಿ ಜಯಂತಿ ದಿನದಂದು ರೈತರ ಮೇಲೆ ಲಾಠಿ ಪ್ರಹಾರ ಮಾಡಿರುವ ಈ ಸರ್ಕಾರ ರೈತರ ಪರ ಕೆಲಸ ಮಾಡುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.