ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆ ಯಾವುದೇ ಫಲಿತಾಂಶ ಕಾಣದೇ ಅಂತ್ಯಗೊಂಡಿದೆ. ಡಿಸೆಂಬರ್ 9ರಂದು ಮತ್ತೊಂದು ಸುತ್ತಿನ ಸಭೆ ಸೇರಲು ನಿರ್ಧರಿಸಲಾಗಿದೆ.
‘ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ‘ಹೌದು’ ಅಥವಾ ‘ಇಲ್ಲ’ ಎಂಬ ಸ್ಪಷ್ಟ ಉತ್ತರ ಬೇಕು’ ಎಂದು ರೈತರು ಪಟ್ಟುಹಿಡಿದಿದ್ದಾರೆ.
‘ಈ ಕುರಿತು ಆಂತರಿಕವಾಗಿ ಸಮಗ್ರ ಚರ್ಚೆ ನಡೆಸುವ ಅಗತ್ಯವಿದ್ದು ಅದಕ್ಕೆ ಸ್ವಲ್ಪ ಸಮಯ ಬೇಕು’ ಎಂದು ಸರ್ಕಾರದ ಪ್ರತಿನಿಧಿಗಳು ಮನವಿ ಮಾಡಿದರು. ಹೀಗಾಗಿ ಡಿಸೆಂಬರ್ 9ರಂದು ಮುಂದಿನ ಮಾತುಕತೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
‘ಮಂಡಿ ಪದ್ಧತಿ ಹಾಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಇತಿಶ್ರೀ ಹಾಡಲಿರುವ ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು’ ಎಂದು ರೈತ ಸಂಘಟನೆಗಳ ಪ್ರತಿನಿಧಿಗಳು ಪಟ್ಟುಹಿಡಿದ ಕಾರಣ ಸರ್ಕಾರದ ಪ್ರತಿನಿಧಿಗಳು ಯಾವುದೇ ಭರವಸೆ ನೀಡಲು ಆಗಲಿಲ್ಲ.
ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್ ಹಾಗೂ ಸೋಮ್ ಪ್ರಕಾಶ್ ಅವರು ರೈತ ಪ್ರತಿನಿಧಿಗಳ ಜೊತೆ ಸತತ ನಾಲ್ಕು ತಾಸು ಚರ್ಚೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ರೈತರ ಪ್ರತಿನಿಧಿಗಳು ‘ಹೌದು’, ‘ಇಲ್ಲ’ ಎಂದು ಬರೆಯಲಾಗಿದ್ದ ಕಾಗದಗಳನ್ನು ಹಿಡಿದಿದ್ದರು. ಎರಡರಲ್ಲಿ ಒಂದು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.