ADVERTISEMENT

ಚಿತ್ತ ಸೆಳೆದ ರೈತರ ಬಂದ್‌: ಹಲವು ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ

ಗೋವಾ, ಈಶಾನ್ಯದಲ್ಲಿ ನೀರಸ

ಪಿಟಿಐ
Published 8 ಡಿಸೆಂಬರ್ 2020, 19:47 IST
Last Updated 8 ಡಿಸೆಂಬರ್ 2020, 19:47 IST
ಬಂದ್‌ ಅಂಗವಾಗಿ ಚಂಡೀಗಡದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ
ಬಂದ್‌ ಅಂಗವಾಗಿ ಚಂಡೀಗಡದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ   

ನವದೆಹಲಿ/ಚಂಡೀಗಡ: ದೇಶದ ಹಲವು ಭಾಗಗಳಲ್ಲಿ ಮಂಗಳವಾರ ಜನಜೀವನ ಅಸ್ತವ್ಯಸ್ತವಾಗಿತ್ತು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನೀಡಿದ್ದ ಬಂದ್‌ ಕರೆಯಿಂದಾಗಿ ವಿವಿಧೆಡೆ ಅಂಗಡಿ ಮತ್ತು ಇತರ ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದವು. ರೈತರು ಮತ್ತು ಅವರ ಪರ ಇರುವವರು ಪ್ರಮುಖ ರಸ್ತೆ ಮತ್ತು ರೈಲು ಹಳಿಗಳಲ್ಲಿ ಧರಣಿ ನಡೆಸಿದರು. ಹಾಗಾಗಿ ಸಂಚಾರ ವ್ಯವಸ್ಥೆಯೂ ವ್ಯತ್ಯಯವಾಗಿತ್ತು. ರೈತರು ಕರೆ ನೀಡಿರುವ ಬಂದ್‌ ದೇಶದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿಭಟನೆಯು ಬಹುತೇಕ ಶಾಂತಿಯುತವಾಗಿಯೇ ಇತ್ತು. ತಮ್ಮ ಬಂದ್‌ ಕರೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿಕೊಂಡಿದ್ದಾರೆ. ಇದರ ಮಧ್ಯೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿಭಟನಕಾರರನ್ನು ಮಾತುಕತೆಗೆ ಆಹ್ವಾನಿಸಿ, ಅವರ ಬೇಡಿಕೆಗಳನ್ನು ಆಲಿಸಿದರು.

‘ದೇಶದ 25 ರಾಜ್ಯಗಳ ಸುಮಾರು 10 ಸಾವಿರ ಸ್ಥಳಗಳಲ್ಲಿ ಬಂದ್‌ ನಡೆಸಲಾಗಿದೆ’ ಎಂದು ಸ್ವರಾಜ್‌ ಇಂಡಿಯಾ ನಾಯಕ ಯೋಗೇಂದ್ರ ಯಾದವ್‌ ಹೇಳಿದ್ದಾರೆ.

ADVERTISEMENT

ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಇರುವ ಹೆಚ್ಚಿನ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ರೈತರ ಪ್ರತಿಭಟನೆಯ ಕೇಂದ್ರಗಳಾಗಿರುವ ಪಂಜಾಬ್‌, ಹರಿಯಾಣ ಮತ್ತು ದೆಹಲಿಯಲ್ಲಿ ಬಂದ್‌ನ ಪರಿಣಾಮ ತೀವ್ರವಾಗಿತ್ತು.

ದೇಶದಾದ್ಯಂತ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಕೋವಿಡ್‌–19 ಸಾಂಕ್ರಾಮಿಕದ ಬಗ್ಗೆ ಪ್ರತಿಭಟನಕಾರರು ತಲೆ ಕೆಡಿಸಿಕೊಂಡಂತೆ ಕಾಣಿಸಲಿಲ್ಲ. ದೆಹಲಿಯ ಗಡಿಗಳಲ್ಲಿಯಂತೂ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

***

ಮೂರೂ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ನಮ್ಮ ಬೇಡಿಕೆ ಈಡೇರದೇ ಇದ್ದರೆ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಒಯ್ಯುತ್ತೇವೆ

- ಹನ್ನನ್‌ ಮೊಲ್ಲಾ, ಅಖಿಲ ಭಾರತ ಕಿಸಾನ್‌ ಸಭಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.