ADVERTISEMENT

ಕಾಯ್ದೆ ಸ್ಥಗಿತ ಪ್ರಸ್ತಾವ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 20:09 IST
Last Updated 21 ಜನವರಿ 2021, 20:09 IST

ನವದೆಹಲಿ: ಕೇಂದ್ರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವ ಸರ್ಕಾರದ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ಗುರುವಾರ ತಿರಸ್ಕರಿಸಿವೆ. ಬಿಕ್ಕಟ್ಟು ಪರಿಹಾರಕ್ಕೆ ಜಂಟಿ ಸಮಿತಿಯನ್ನು ರಚಿಸುವ ಪ್ರಸ್ತಾವಕ್ಕೂ ಒಪ್ಪಿಗೆ ಸಿಕ್ಕಿ‌ಲ್ಲ. ಎರಡು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ.

ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳ ಒಕ್ಕೂಟ ‘ಸಂಯುಕ್ತ ಕಿಸಾನ್ ಮೋರ್ಚಾ’ ಇದನ್ನು ಘೋಷಿಸಿತು.

ರೈತರು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವೆ 11ನೇ ಸುತ್ತಿನ ಮಾತುಕತೆ ಶುಕ್ರವಾರಕ್ಕೆ ನಿಗದಿಯಾಗಿದೆ. ಇದಕ್ಕೂ ಮುನ್ನಾದಿನ ನಡೆದ ರೈತ ಮೋರ್ಚಾದ ಸುದೀರ್ಘ ಅವಧಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ಜಾಥಾದ ಮಾರ್ಗವನ್ನು ಬದಲಾಯಿಸಲು ದೆಹಲಿ ಪೊಲೀಸರು ಮುಂದಿಟ್ಟ ಸಲಹೆಗಳನ್ನು ಒಕ್ಕೂಟ ತಿರಸ್ಕರಿಸಿದಾಗಲೇ ಈ ಸಭೆಯ ಫಲಿತಾಂಶದ ಮುನ್ಸೂಚನೆ ಸಿಕ್ಕಿತ್ತು.

ADVERTISEMENT

‘ಬುಧವಾರ ಸರ್ಕಾರ ಮಂಡಿಸಿದ ಪ್ರಸ್ತಾವನೆಯನ್ನು ಗುರುವಾರ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ ಸಾಮಾನ್ಯ ಸಭೆಯಲ್ಲಿ ತಿರಸ್ಕರಿಸಲಾಗಿದೆ’ ಎಂದು ಒಕ್ಕೂಟ ತಿಳಿಸಿದೆ.

‘ಚಳವಳಿಯಲ್ಲಿ ಈವರೆಗೆ ಹುತಾತ್ಮರಾದ 143 ರೈತರಿಗೆ ಒಕ್ಕೂಟ ಗೌರವ ಸಲ್ಲಿಸುತ್ತದೆ. ಈ ಸಾಮೂಹಿಕ ಆಂದೋಲನದಲ್ಲಿ ಹೋರಾಡುವಾಗ ಜೊತೆಗಾರರು ನಮ್ಮಿಂದ ಬೇರ್ಪಟ್ಟಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಮತ್ತು ಕಾಯ್ದೆಗಳನ್ನು ರದ್ದುಗೊಳಿಸದೆ ನಾವು ಹಿಂತಿರುಗುವುದಿಲ್ಲ’ ಎಂದು ಒಕ್ಕೂಟ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.