ADVERTISEMENT

ಗಣರಾಜ್ಯೋತ್ಸವಕ್ಕೆ ಟ್ರ್ಯಾಕ್ಟರ್‌ ಜಾಥಾದ ಭೀತಿ

ಪ್ರತಿಭಟನೆಗೆ ನಿಷೇಧ ಹೇರುವಂತೆ ‘ಸುಪ್ರೀಂ’ಗೆ ಕೇಂದ್ರದ ಅರ್ಜಿ: ಜಾಥಾ ನಡೆಸಲು ರೈತರ ನಿರ್ಧಾರ

ಪಿಟಿಐ
Published 12 ಜನವರಿ 2021, 18:13 IST
Last Updated 12 ಜನವರಿ 2021, 18:13 IST
ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಟಿಕ್ರಿ ಗಡಿಯಲ್ಲಿ ಮಂಗಳವಾರ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು –ಪಿಟಿಐ ಚಿತ್ರ
ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಟಿಕ್ರಿ ಗಡಿಯಲ್ಲಿ ಮಂಗಳವಾರ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು –ಪಿಟಿಐ ಚಿತ್ರ   

ನವದೆಹಲಿ:ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಟ್ರ್ಯಾಕ್ಟರ್‌, ಟ್ರಾಲಿ ಜಾಥಾ ಅಥವಾ ಇನ್ನಾವುದೇ ರೀತಿಯ ಪ್ರತಿಭಟನೆಗೆ ನಿಷೇಧ ಹೇರಬೇಕು ಎಂದು ಕೋರಿ ಕೇಂದ್ರ ಸರ್ಕಾರವು ದೆಹಲಿ ಪೊಲೀಸರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಸಂಬಂಧಿಸಿ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ಪೀಠವು ರೈತ ಸಂಘಟನೆಗಳಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಪ್ರತಿಭಟನಕಾರರ ಸಣ್ಣ ಗುಂಪು ಅಥವಾ ಸಂಘಟನೆಗಳು ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ನಡೆಸಲು ಯೋಜನೆ ಹಾಕಿಕೊಂಡಿವೆ ಎಂಬ ಮಾಹಿತಿ ಭದ್ರತಾ ಸಂಸ್ಥೆಗಳಿಗೆ ಸಿಕ್ಕಿದೆ ಎಂದು ಅರ್ಜಿಯಲ್ಲಿ ಸರ್ಕಾರವು ತಿಳಿಸಿದೆ.

ರೈತರು ನಡೆಸುತ್ತಿರುವ ಪ್ರತಿಭಟನೆಯು ‘ಅಪಾಯಕಾರಿ’ ಎಂದು ಕಾಯ್ದೆಗಳ ಪರವಾಗಿರುವ ಹಿರಿಯ ವಕೀಲ ಪಿ.ಎಸ್‌. ನರಸಿಂಹ ಅವರು ನ್ಯಾಯಪೀಠಕ್ಕೆ ವಿಚಾರಣೆ ವೇಳೆ ಹೇಳಿದರು. ‘ಸಿಖ್ಸ್‌ ಫಾರ್‌ ಜಸ್ಟಿಸ್‌’ ನಂತಹ ನಿಷೇಧಿತ ಸಂಘಟನೆಗಳು ಕೂಡ
ಈ ಪ್ರತಿಭಟನೆಯಲ್ಲಿ ಭಾಗಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್ ಅವರೂ ನರಸಿಂಹ ಅವರ ವಾದವನ್ನು ಬೆಂಬಲಿಸಿದರು. ಜನವರಿ 26
ರಂದು ನಡೆಸಲು ಉದ್ದೇಶಿಸಲಾಗಿರುವ ಜಾಥಾವನ್ನು ಅವರು ಉಲ್ಲೇಖಿಸಿದರು.

‘ನ್ಯಾಯಾಂಗೀಯ ಪ್ರಕ್ರಿಯೆಯಲ್ಲಿ ಫಲ ದೊರೆಯಲಿ ಎಂಬ ಮನಸ್ಥಿತಿ ಯಾರಿಗೂ ಇಲ್ಲ ಎಂಬುದನ್ನು ಭಾರವಾದ ಹೃದಯದಿಂದಲೇ ಹೇಳುತ್ತಿದ್ದೇನೆ. ಈ ಪ್ರತಿಭಟನೆ ಮೂಲಕ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಕೆಲವರು ಬಯಸಿದ್ದಾರೆ’ ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದರು.

ಜನವರಿ 26ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಯೋಜನೆಯಿಂದ ಹಿಂದೆ ಸರಿದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಕೆಂಪು ಕೋಟೆಗೆ ಅಥವಾ ಸಂಸತ್ತಿಗೆ ಹೋಗುತ್ತೇವೆ’ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಜಾಥಾ ಹೇಗಿರುತ್ತದೆ ಎಂಬುದನ್ನು 15ರ ನಂತರ ತೀರ್ಮಾನಿಸಲಾಗುವುದು. ಜಾಥಾ ಸಂಪೂರ್ಣ ಶಾಂತಿಯುತವಾಗಿ ಇರುತ್ತದೆ’ ಎಂದು ರೈತರು ತಿಳಿಸಿದ್ದಾರೆ.

‘ದೆಹಲಿಯಲ್ಲಿ ಮಾತ್ರವಲ್ಲದೆ, ದೇಶದ ಇತರ ಭಾಗಗಳಲ್ಲಿಯೂ ಈ ಜಾಥಾ ಇರಲಿದೆ. ಮುಂದಿನ ದಿನಗಳಲ್ಲಿ ಬಿಹಾರ, ಛತ್ತೀಸಗಡ ಮತ್ತು ಕರ್ನಾಟಕ ಸೇರಿ ಹೆಚ್ಚು ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಗಲಿದೆ. ಲೊಹ್ರಿ ಹಬ್ಬ (ಪಂಜಾಬ್‌ನ ಜನಪದ ಹಬ್ಬ) ಆಚರಣೆಯ ಭಾಗವಾಗಿ, ಕಾಯ್ದೆಗಳ ಪ್ರತಿಗಳನ್ನು ಬುಧವಾರ ಸುಡಲಾಗುವುದು’ ಎಂದು ರೈತರ ಮುಖಂಡರು ಹೇಳಿದ್ದಾರೆ.

‘ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು’: ನಿಷೇಧಿತ ಸಂಘಟನೆಯೊಂದು ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ ಎಂದು ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯ‍ಪೀಠದ ಗಮನಕ್ಕೆ ತರಲಾಯಿತು. ಈ ಬಗ್ಗೆ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರನ್ನು ಪೀಠವು ಪ್ರಶ್ನಿಸಿತು. ‘ಖಲಿಸ್ತಾನಿಗಳು ಪ್ರತಿಭಟನೆಗೆ ನುಸುಳಿದ್ದಾರೆ’ ಎಂದು ವೇಣುಗೋಪಾಲ್‌ ಅವರು ತಿಳಿಸಿದರು. ಈ ಬಗ್ಗೆ ಬುಧವಾರದೊಳಗೆ ಪ್ರಮಾಣಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದರು.

ಹರಿಯಾಣ: ಜೆಜೆಪಿ ಶಾಸಕರಿಗೆ ಅತೃಪ್ತಿ

ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯಬೇಕು. ಇಲ್ಲದೇ ಇದ್ದರೆ ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಮೈತ್ರಿಯ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಎಂದು ಜೆಜೆಪಿಯ ಕೆಲವು ಶಾಸಕರು ಹೇಳಿದ್ದಾರೆ. ಈ ಹೇಳಿಕೆ ಪ್ರಕಟವಾದ ಬಳಿಕ, ಜೆಜೆಪಿ ಅಧ್ಯಕ್ಷ ಮತ್ತು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆ.

ಹರಿಯಾಣ, ಪಂಜಾಬ್ ಮತ್ತು ದೇಶದ ಇತರೆಡೆಗಳ ರೈತರು ಈ ಕಾಯ್ದೆಗಳ ವಿರುದ್ಧ ಇದ್ದಾರೆ. ಹಾಗಾಗಿ ಕೇಂದ್ರವು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ನಮ್ಮ ಭಾವನೆಗಳನ್ನು ದುಷ್ಯಂತ ಅವರು ಅಮಿತ್‌ ಶಾಗೆ ತಿಳಿಸಬೇಕು ಎಂದು ಜೆಜೆಪಿ ಶಾಸಕ ಜೋಗಿ ರಾಮ್‌ ಹೇಳಿದ್ದಾರೆ. ಇತರ ಕೆಲವು ಶಾಸಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ಸೋಮವೀರ್‌ ಸಂಗ್ವಾನ್‌ ಅವರು ತಮ್ಮ ಬೆಂಬಲವನ್ನು ಈಗಾಗಲೇ ಹಿಂದಕ್ಕೆ ಪಡೆದಿದ್ದಾರೆ.

90 ಶಾಸಕರ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿಯ 40 ಶಾಸಕರಿದ್ದಾರೆ. ಜೆಜೆಪಿಯ 10 ಶಾಸಕರ ಬೆಂಬಲದೊಂದಿಗೆ ಬಿಜೆಪಿ–ಜೆಜೆಪಿ ಮೈತ್ರಿ ಸರ್ಕಾರ ಅಲ್ಲಿ ಅಸ್ತಿತ್ವದಲ್ಲಿದೆ.

ಪೀಠವು ಹೇಳಿದ್ದೇನು?

l ಹೊಸ ಕಾಯ್ದೆಗಳ ಪ್ರಕಾರ ಕೈಗೊಂಡ ಕ್ರಮಗಳಿಂದ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು

l ಕಾಯ್ದೆಗಳ ಜಾರಿಗೆ ಮುಂಚೆ ಇದ್ದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ

l ನಾಲ್ವರು ಸದಸ್ಯರ ಸಮಿತಿಯು ಹತ್ತು ದಿನಗಳ ಒಳಗೆ ದೆಹಲಿಯಲ್ಲಿ ಮೊದಲ ಸಭೆ ನಡೆಸಲಿದೆ. ಮೊದಲ ಸಭೆಯಿಂದ ಎರಡು ತಿಂಗಳ ಒಳಗೆ ಸಮಿತಿಯು ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು

l ಕಾಯ್ದೆಗಳ ಜಾರಿಗೆ ತಡೆ ನೀಡಿರುವುದರಿಂದ ರೈತರು ಬೇಸಾಯಕ್ಕೆ ಮರಳುವಂತೆ ಮನವೊಲಿಸಲು ರೈತ ಸಂಘಟನೆಗಳಿಗೆ ಸಾಧ್ಯವಾಗಬಹುದು

l ಎಂಟು ವಾರಗಳ ಬಳಿಕ ಮುಂದಿನ ವಿಚಾರಣೆ

ರೈತರ ಸಹನೆಗೆ ಶ್ಲಾಘನೆ: ಅಹಿತಕರ ಘಟನೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ನ್ಯಾಯಪೀಠವು ಶ್ಲಾಘಿಸಿದೆ.ಪ್ರತಿಭಟನೆಯನ್ನು ದಮನ ಮಾಡುವ ಉದ್ದೇಶ ಇಲ್ಲ. ಕಾಯ್ದೆಗಳ ಜಾರಿಗೆ ತಡೆ ನೀಡಿರುವುದು ಅಸಾಧಾರಣವಾದ ಕ್ರಮವಾಗಿದೆ. ಇದು ಪ್ರತಿಭಟನೆಗೆ ದೊರೆತ ಜಯ ಎಂದು ಪರಿಗಣಿಸಬಹುದು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.