ADVERTISEMENT

ಜಮ್ಮು ಮತ್ತು ಕಾಶ್ಮೀರ: ಕೋವಿಡ್‌ ಪ್ರಕರಣ ದಿಢೀರ್‌ ಹೆಚ್ಚಳ

ಒಂದೇ ದಿನ 1,148 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 13:53 IST
Last Updated 12 ಜನವರಿ 2022, 13:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 11 ದಿನಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

2021ರ ಡಿಸೆಂಬರ್‌ ತಿಂಗಳಲ್ಲಿ 4,315 ಇದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ 2022ರ ಜನವರಿ 11ರವರೆಗೆ 5,339 ಪ್ರಕರಣ ಪತ್ತೆಯಾಗಿವೆ. ಮಂಗಳವಾರ (ಜ.11) ಒಂದೇ ದಿನ 1,148 ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ವಾರ ಕಣಿವೆಯಾದ್ಯಂತ ಕೇವಲ 199 ಪ್ರಕರಣಗಳಷ್ಟೆ ವರದಿಯಾಗಿದ್ದವು.

‘ಜಮ್ಮು ಹಾಗೂ ಕಾಶ್ಮೀರದ ಎರಡೂ ವಿಭಾಗಗಳಲ್ಲೂ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ನಾವು ಒಮಿಕ್ರಾನ್‌ ಖಚಿತಪಡಿಸುವ ಪ್ರಯೋಗಾಲಯ ಹೊಂದಿಲ್ಲ.ಆದರೂ ಅತಿ ಹೆಚ್ಚು ಪ್ರಮಾಣದ ಕೋವಿಡ್‌ ಪ್ರಕರಣ ವರದಿ ಆಗುತ್ತಿರುವುದನ್ನು ಗಮನಿಸಿದರೆ ಒಮಿಕ್ರಾನ್‌ ಕಾರಣದಿಂದಾಗಿಯೇ ಹೆಚ್ಚಳವಾಗುತ್ತಿರುವುದು ಸ್ಪಷ್ಟವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ವಿವೇಕ್‌ ಭಾರದ್ವಾಜ್‌ ತಿಳಿಸಿದರು.

ADVERTISEMENT

‘ಕೇಂದ್ರಾಡಳಿತ ಪ್ರದೇಶದಾದ್ಯಂತ ಒಮಿಕ್ರಾನ್‌ ಅಲೆ ಶುರುವಾಗಿದ್ದು, ಇಲ್ಲಿನ ಆಡಳಿತವು ಚುರುಕುಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕಣಿವೆಯಾದ್ಯಂತ 6,000 ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಾಗಿದೆ. ಈವರೆಗೆ ಒಟ್ಟು 15 ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ ಮಂಗಳವಾರ (ಜ.11) ಒಂದೇ ದಿನ 10 ಪ್ರಕರಣಗಳು ವರದಿಯಾಗಿದೆ’ ಎಂದು ಅವರು ಹೇಳಿದರು.

‘ಕಾಶ್ಮೀರದಲ್ಲಿ ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಪ್ರತಿನಿತ್ಯ ಗರಿಷ್ಠ 3,500 ಪ್ರಕರಣಗಳು ದಾಖಲಾಗಿದ್ದವು. ಆದರೆ ಈಗ ಓಮಿಕ್ರಾನ್‌ ತೀವ್ರ ಹರಡುವ ಸ್ವಭಾವ ಹೊಂದಿರುವುದರಿಂದ ಎರಡನೇ ಅಲೆಗಿಂತ ಐದು ಪಟ್ಟು ಹೆಚ್ಚಳ ಆಗಬಹುದು. ಇದೇ ಪ್ರಮಾಣ ಫೆಬ್ರುವರಿ ಕೊನೆಯ ವಾರದವರೆಗೆ ಉಳಿಯಬಹುದು’ ಎಂದು ಕಾಶ್ಮೀರದ ಕೋವಿಡ್‌ ನಿಯಂತ್ರಣ ಕೇಂದ್ರದ ಅಂಕಿ ಅಂಶ ವಿಶ್ಲೇಷಕ ಡಾ ರೂಫ್ ಹಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.