ಫಾಸ್ಟ್ ಟ್ಯಾಗ್
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರವು ಆಗಸ್ಟ್ 15ರಿಂದ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿಗೊಳಿಸಲಿದೆ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಪ್ರಕಟಿಸಿದ್ದಾರೆ.
ಫಾಸ್ಟ್‌ಟ್ಯಾಗ್ ಕಾರ್ಡ್‌ಗಳನ್ನು ಪದೇ ಪದೇ ರೀಚಾರ್ಜ್ ಮಾಡುವ ಅಥವಾ ಹೆದ್ದಾರಿ ಶುಲ್ಕ ವಸೂಲಿ ಕೇಂದ್ರಗಳಲ್ಲಿ ನಗದು ಬಳಸಿ ಶುಲ್ಕ ಪಾವತಿಸುವ ಅಗತ್ಯವಿಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ ಎಂದು ಗಡ್ಕರಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಈಗಾಗಲೇ ಫಾಸ್ಟ್‌ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್‌ಟ್ಯಾಗ್ ಖರೀದಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
‘ವಾರ್ಷಿಕ ಪಾಸ್ ಅನ್ನು ನಿಮ್ಮಲ್ಲಿರುವ ಫಾಸ್ಟ್‌ಟ್ಯಾಗ್‌ನಲ್ಲಿ ಸಕ್ರಿಯಗೊಳಿಸಬಹುದು. ಆದರೆ, ಫಾಸ್ಟ್‌ಟ್ಯಾಗ್ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು (ಅಂದರೆ, ಅದನ್ನು ವಾಹನದ ವಿಂಡ್‌ಶೀಲ್ಡ್‌ನಲ್ಲಿ ಸರಿಯಾಗಿ ಅಂಟಿಸಿರಬೇಕು, ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಮಾಡಿರಬೇಕು, ಕಪ್ಪುಪಟ್ಟಿಗೆ ಸೇರಿರಬಾರದು ಇತ್ಯಾದಿ)’ ಎಂದು ಸಚಿವಾಲಯ ತಿಳಿಸಿದೆ.
ರಸ್ತೆ ಸಾರಿಗೆ ಸಚಿವಾಲಯದ 2024ರ ವರ್ಷಾಂತ್ಯದ ಮಾಹಿತಿ ಪ್ರಕಾರ, 2024 ಡಿಸೆಂಬರ್ 1ರವರೆಗೆ 10.1 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ.
‘ಹೊಸ ಕ್ರಮವು 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲೀನ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಸುಲಭ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ’ ಎಂದು ಗಡ್ಕರಿ ತಿಳಿಸಿದ್ದಾರೆ.
ಈಗ ನಿರ್ದಿಷ್ಟ ಟೋಲ್ ಪ್ಲಾಜಾ ಮೂಲಕ ಆಗಾಗ ಹಾದುಹೋಗುವ ವಾಹನಗಳಿಗೆ ಮಾಸಿಕ ಪಾಸ್‌ಗಳು ಲಭ್ಯವಿವೆ. ತಿಂಗಳಿಗೆ ₹340 ಮತ್ತು ವಾರ್ಷಿಕವಾಗಿ ₹4,080 ಪಾವತಿಸಿ ಈ ಪಾಸ್ ಪಡೆಯಬಹುದು. ರಾಷ್ಟ್ರೀಯ ಹೆದ್ದಾರಿ ಶುಲ್ಕ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಸರಾಸರಿ ದೈನಂದಿನ ಟೋಲ್ ಸಂಗ್ರಹವು ₹ 200 ಕೋಟಿಯಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.