ADVERTISEMENT

ಶ್ರೀಕೃಷ್ಣನ ಭೇಟಿಗಾಗಿ ಬಂದ ರಷ್ಯನ್‌ ಮಹಿಳೆ ಆತ್ಮಹತ್ಯೆ!

ಉತ್ತರ ಪ್ರದೇಶದ ವೃಂದಾವನದಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 15:39 IST
Last Updated 24 ಜನವರಿ 2021, 15:39 IST
ಶ್ರೀಕೃಷ್ಣನ ವಿಗ್ರಹ (ಸಾಂದರ್ಭಿಕ ಚಿತ್ರ)
ಶ್ರೀಕೃಷ್ಣನ ವಿಗ್ರಹ (ಸಾಂದರ್ಭಿಕ ಚಿತ್ರ)   

ಲಖನೌ: ಭಗವಾನ್ ಶ್ರೀಕೃಷ್ಣನನ್ನು ಭೇಟಿಯಾಗಲು ಬಯಸಿದ ರಷ್ಯಾದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನ ಪಟ್ಟಣದ ಅಪಾರ್ಟ್‌ವೊಂದರ ಆರನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದ ಘಟನೆ ಶನಿವಾರ ನಡೆದಿದೆ.

ಮೃತ ಮಹಿಳೆಯನ್ನು ರಷ್ಯಾದ ಟಟ್‌ಯಾನ ಹೆಮೆಲೋವಸ್ಕಾಯ (41) ಎಂದು ಗುರುತಿಸಲಾಗಿದೆ. ಇವರು ವೃಂದಾವನದ ರಮಣ್ ರೇತಿ ಪ್ರದೇಶದ ಅಪಾರ್ಟ್‌ವೊಂದರಲ್ಲಿ ವಾಸಿಸುತ್ತಿದ್ದರು.

‘ಟಟ್‌ಯಾನ ಶನಿವಾರ ಸಂಜೆಯ ವೇಳೆ ತಮ್ಮ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯ ಕಿಟಕಿ ಮೂಲಕ ಜಿಗಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು’ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.

ADVERTISEMENT

ರಮಣ್ ರೇತಿಯಲ್ಲಿರುವ ಅಪಾರ್ಟ್‌ಮೆಂಟ್‌ ‘ರಷ್ಯನ್ ಬಿಲ್ಡಿಂಗ್’ಎಂದೇ ಜನಪ್ರಿಯವಾಗಿದೆ. 2020ರ ಫೆಬ್ರುವರಿಯಿಂದಲೇ ರಷ್ಯನ್ ಮಹಿಳೆ ಟಟ್‌ಯಾನ ಹೆಮೆಲೋವಸ್ಕಾಯ ಇಲ್ಲಿ ವಾಸವಿದ್ದರು.

‘ಟಟ್‌ಯಾನ ಅವರ ಕನಸಿನಲ್ಲಿ ಭಗವಾನ್ ಶ್ರೀಕೃಷ್ಣ ಬರುತ್ತಿದ್ದ. ದೇವರನ್ನು ಭೇಟಿಯಾಗಬೇಕೆಂದು ಆಕೆ ಹಂಬಲಿಸುತ್ತಿದ್ದಳು’ ಎಂದು ಟಟ್‌ಯಾನ ಅವರ ಜತೆಗೆ ವಾಸಿಸುತ್ತಿದ್ದ ಸ್ನೇಹಿತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

‘ಟಟ್‌ಯಾನ್ ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದರು’ ಎಂದು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ನಿವಾಸಿಗಳು ಹೇಳಿದ್ದಾರೆ.

ವೃಂದಾವನ ಮತ್ತು ಮಥುರಾದಲ್ಲಿ ಶ್ರೀಕೃಷ್ಣನ ಅನೇಕ ದೇವಾಲಯಗಳಿದ್ದು ಜಗತ್ತಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

‘ಮೇಲ್ನೋಟಕ್ಕೆ ಈ ಘಟನೆಯು ಆತ್ಮಹತ್ಯೆ ಎಂದು ಗೋಚರಿಸುತ್ತಿದೆ. ಆದರೂ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ’ ಎಂದು ಮಥುರಾದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಈಗಾಗಲೇ ನವದೆಹಲಿಯಲ್ಲಿರುವ ರಷ್ಯನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.