ADVERTISEMENT

ತಂದೆಯೇ ಮಗುವಿನ ಸಹಜ ಕಸ್ಟಡಿಯನ್: ಸುಪ್ರೀಂ ಕೋರ್ಟ್‌

ನಾದಿನಿಯರ ಬಳಿ ಇದ್ದ ಅಪ್ರಾಪ್ತ ವಯಸ್ಕ ಮಗಳನ್ನು ಪಡೆಯಲು ವ್ಯಕ್ತಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 16:58 IST
Last Updated 21 ಆಗಸ್ಟ್ 2024, 16:58 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ತಂದೆಯೇ ಮಗುವಿನ ಸಹಜ ಕಸ್ಟಡಿಯನ್. ಮಗುವಿನ ಲಾಲನೆ–ಪಾಲನೆ ಮಾಡಲು ಅವರೇ ಸೂಕ್ತ ವ್ಯಕ್ತಿ ಎಂದಿರುವ ಸುಪ್ರೀಂ ಕೋರ್ಟ್‌, ನಾದಿನಿಯರ ಬಳಿ ಇದ್ದ ಅಪ್ರಾಪ್ತ ವಯಸ್ಕ ಮಗಳನ್ನು ತನ್ನ ‌ಕಸ್ಟಡಿಗೆ ಪಡೆಯಲು ವ್ಯಕ್ತಿಗೆ ಅನುಮತಿ ನೀಡಿದೆ.

ಹೆರಿಗೆಯಾದ 10 ದಿನಗಳ ಒಳಗೆ, ಕೋವಿಡ್‌–19ನಿಂದಾಗಿ ಪತ್ನಿ ಮೃತಪಟ್ಟ ನಂತರ, ಪತಿ ಗೌತಮಕುಮಾರ್‌ ದಾಸ್‌ ಎಂಬುವವರು ತನ್ನ ಮಗಳನ್ನು ನಾದಿನಿಯರ ಬಳಿ ಬಿಟ್ಟಿದ್ದರು. ಕೆಲ ವರ್ಷಗಳ ನಂತರ, ಮಗಳನ್ನು ತನ್ನ ಸುಪರ್ದಿಗೆ ನೀಡಲು ನಾದಿನಿಯರು ನಿರಾಕರಿಸಿದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಗೌತಮಕುಮಾರ್‌ ದಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್‌ ಅವರಿದ್ದ ನ್ಯಾಯಪೀಠ ನಡೆ‌ಸಿತು.

ADVERTISEMENT

‘ದುರದೃಷ್ಟಕರ ಸನ್ನಿವೇಶಗಳ ಕಾರಣದಿಂದಾಗಿ ಅರ್ಜಿದಾರ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು ನಾದಿನಿಯರ (ಪ್ರತಿವಾದಿ ಸಂಖ್ಯೆ 5 ಮತ್ತು 6) ಬಳಿ ತಾತ್ಕಾಲಿಕವಾಗಿ ಬಿಟ್ಟಿದ್ದರು. ಅವರು ಕೆಲ ವರ್ಷಗಳ ಕಾಲ ಸಲುಹಿದ್ದಾರೆ ಎಂಬುದು ಬಾಲಕಿಯನ್ನು ತಂದೆಯ ಕಸ್ಟಡಿಗೆ ನೀಡಲು ನಿರಾಕರಿಸುವುದಕ್ಕೆ ಆಧಾರವಾಗದು’ ಎಂದು ಪೀಠ ಹೇಳಿದೆ.

ಈ ಕುರಿತು ಪೀಠವು ಆಗಸ್ಟ್‌ 20ರಂದು ಆದೇಶ ಹೊರಡಿಸಿದೆ. ಅಲ್ಲದೇ, ಮಗುವನ್ನು ಭೇಟಿಯಾಗಲು ನಾದಿನಿಯರಿಗೆ ಅವಕಾಶವನ್ನೂ ನೀಡಿದೆ.

ಗೌತಮಕುಮಾರ್‌ ದಾಸ್‌ ಅವರು ಪತ್ನಿ ನಿಧನವಾದ ನಂತರ, ಪುತ್ರ ಹಾಗೂ ಪುತ್ರಿಯನ್ನು ಪತ್ನಿಯ ಸಹೋದರಿಯರ ಸುಪರ್ದಿಗೆ ನೀಡಿದ್ದರು.  

ಕೆಲ ವರ್ಷಗಳ ನಂತರ, ನಾದಿನಿಯರು ಮಗನನ್ನು ಮಾತ್ರ ದಾಸ್‌ ಅವರಿಗೆ ನೀಡಿದ್ದರು. ಚಿಕ್ಕವಯಸ್ಸಿನ ಕಾರಣ ನೀಡಿ ಮಗಳನ್ನು ದಾಸ್‌ ಸುಪರ್ದಿಗೆ ನೀಡುವುದಕ್ಕೆ ನಿರಾಕರಿಸಿದ್ದರು.

ಇದನ್ನು ಪ್ರಶ್ನಿಸಿ ದಾಸ್‌ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರೂ, ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ, ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.