ನವದೆಹಲಿ: ಮಗನಿಗೆ 18 ವರ್ಷ ತುಂಬಿದ ಕೂಡಲೆ ತಂದೆಯ ಬಾಧ್ಯತೆ ಕೊನೆಗೊಳ್ಳುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಚ್ಛೇದಿತ ಮಹಿಳೆಗೆ ಆತನ ಮಗನ ಪದವಿ ಮುಗಿಸುವವರೆಗೆ ಅಥವಾ ಆತ ಸಂಪಾದನೆ ಪ್ರಾರಂಭಿಸುವವರೆಗೆ ನೆರವಾಗಲು ₹ 15 ಸಾವಿರ ಮಧ್ಯಂತರ ಜೀವನಾಂಶ ನೀಡುವ ಆದೇಶ ಮಾಡುವ ಸಂದರ್ಭದಲ್ಲಿ ಮಗನಿಗೆ 18 ವರ್ಷ ತುಂಬಿದ ಕೂಡಲೇ ತನ್ನ ಮಗನ ಶಿಕ್ಷಣ ಮತ್ತು ಇತರ ಖರ್ಚುಗಳ ಸಂಪೂರ್ಣ ಹೊರೆ ತಾಯಿಯ ಮೇಲೆ ಮಾತ್ರ ಬೀಳಲಾರದು ಹೇಳಿದೆ.
ಹೆಚ್ಚುತ್ತಿರುವ ಜೀವನ ವೆಚ್ಚದ ಕುರಿತಂತೆ ಕಣ್ಣುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪರಿತ್ಯಕ್ತ ಪತಿ ನೀಡಿದ ಅಲ್ಪ ಪ್ರಮಾಣದ ಜೀವನಾಂಶದಲ್ಲಿಯೇ ಪತ್ನಿ, ಮಗ ಮತ್ತು ಮಗಳ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ನಿರೀಕ್ಷಿಸುವುದು ಅಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.
1997 ರ ನವೆಂಬರ್‌ನಲ್ಲಿ ವಿವಾಹವಾಗಿದ್ಧ ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಅವರು ನವೆಂಬರ್ 2011 ರಲ್ಲಿ ವಿಚ್ಛೇದನ ಪಡೆದರು. ಮಗ ಮತ್ತು ಮಗಳಿಗೆ ಕ್ರಮವಾಗಿ 20 ಮತ್ತು 18 ವರ್ಷ ವಯಸ್ಸಾಗಿತ್ತು.
ಕುಟುಂಬ ನ್ಯಾಯಾಲಯದ ಆದೇಶದ ಪ್ರಕಾರ, ಮಗನು ಮೆಜಾರಿಟಿಗೆ ಬರುವವರೆಗೆ ನಿರ್ವಹಣೆಗೆ ಅರ್ಹನಾಗಿರುತ್ತಾನೆ ಮತ್ತು ಮಗಳು ಉದ್ಯೋಗ ಪಡೆಯುವವರೆಗೆ ಅಥವಾ ಮದುವೆಯಾಗುವವರೆಗೂ ನಿರ್ವಹಣೆಗೆ ಅರ್ಹಳಾಗಿರುತ್ತಾಳೆ ಎಂದಿತ್ತು.
‘ಇಬ್ಬರು ಮಕ್ಕಳು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಮಧ್ಯಂತರ ನಿರ್ವಹಣೆಯನ್ನು ನೀಡುವ ಉದ್ದೇಶವು ಆತನ ಹೆಂಡತಿ ಮತ್ತು ಮಕ್ಕಳು ಹಸಿವಿನಿಂದ ಬಳಲಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.’ ಎಂದು ಕೋರ್ಟ್ ಹೇಳಿದೆ.
18 ನೇ ವಯಸ್ಸಿನಲ್ಲಿ ಮಗನ ಶಿಕ್ಷಣ ಇನ್ನೂ ಮುಗಿದಿರುವುದಿಲ್ಲ. 18 ವರ್ಷ ತುಂಬುವ ಹೊತ್ತಿಗೆ ಆತ 12 ನೇ ತರಗತಿಯನ್ನು ಪಾಸು ಮಾಡಿರಬಹುದು. ಅದರಿಂದ ಆತ ಸಂಪಾದನೆ ಮಾಡಲು ಸಾಧ್ಯವಿಲ್ಲ. ತಾಯಿಯೇ ಆತನನ್ನು ನೋಡಿಕೊಳ್ಳಬೇಕು. ಸಂಪೂರ್ಣ ವೆಚ್ಚ ಭರಿಸಬೇಕು. ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.