ADVERTISEMENT

ವಿದೇಶಿ ದೇಣಿಗೆಗಾಗಿ ಲಂಚ: 437 ದೂರವಾಣಿ ಕರೆ ಆಲಿಸಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 11:35 IST
Last Updated 31 ಜುಲೈ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ವಿದೇಶಿ ದೇಣಿಗೆಯ ಬಾಕಿ ಹಣ ಬಿಡುಗಡೆಗೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಶೇ 5ರಿಂದ ಶೇ 10ರಷ್ಟು ಲಂಚ ಪಡೆಯುವುದು ಸಿಬಿಐ ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆಯ ಪ್ರಕರಣಗಳ ಸಂಬಂಧ 437 ದೂರವಾಣಿ ಕರೆ ಸಂಭಾಷಣೆಗಳನ್ನು ಆಲಿಸಿದಾಗ ಲಂಚದ ಜಾಲ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಎಫ್‌ಸಿಆರ್‌ಎ ಘಟಕದಲ್ಲಿನ ಗೃಹ ಸಚಿವಾಲಯದ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು, ಮಧ್ಯವರ್ತಿಗಳು ಮತ್ತು ಹವಾಲಾ ದಂಧೆಕೋರರು ಈ ಜಾಲದಲ್ಲಿರುವುದನ್ನು ಸಿಬಿಐ, ತಾಂತ್ರಿಕ ಕಣ್ಗಾವಲಿರಿಸಿ ಪತ್ತೆ ಮಾಡಿದೆ.

ಗೃಹ ಸಚಿವಾಲಯದ ಸೂಚನೆ ಮೇರೆಗೆ ಸಿಬಿಐ ನಡೆಸಿದ ತಾಂತ್ರಿಕ ಕಣ್ಗಾವಲಿನಲ್ಲಿ ಮಧ್ಯವರ್ತಿಗಳು ಮತ್ತು ಸಚಿವಾಲಯದ ಎಫ್‌ಆರ್‌ಎ ಘಟಕದ ಅಧಿಕಾರಿಗಳ ದೂರವಾಣಿ ಸಂಭಾಷಣೆ, ವಾಟ್ಸ್‌ ಆ್ಯಪ್‌ ಕರೆಗಳ ಮೇಲೆ ನಿಗಾವಹಿಸಿತ್ತು. ತನಿಖಾ ಸಂಸ್ಥೆಯ ಭಷ್ಟಾಚಾರ ನಿಗ್ರಹ ಘಟಕವು (ಎಸಿಬಿ)ಅಧಿಕಾರಿಗಳು ಮತ್ತು ಎನ್‌ಜಿಒಗಳ ನಡುವೆ ಮಧ್ಯವರ್ತಿಗಳು ಲಂಚದ ಮೊತ್ತ ನಿಗದಿಗೆ ಮಾತುಕತೆ ನಡೆಸಿರುವುದನ್ನು ಪತ್ತೆ ಹಚ್ಚಿತು.ಲಂಚ ಪಡೆಯುತ್ತಿದ್ದ ಎಫ್‌ಆರ್‌ಎ ಘಟಕದ ಆರು ಅಧಿಕಾರಿಗಳು ಸೇರಿ 16 ಆರೋಪಿಗಳನ್ನು ಮೇ 10ರಂದು ತನಿಖಾ ಸಂಸ್ಥೆ ಬಂಧಿಸಿತ್ತು.

ADVERTISEMENT

ಈ ಸಂಬಂಧ ಇತ್ತೀಚೆಗೆ ನಾಲ್ಕು ಚಾರ್ಜ್‌ಶೀಟ್‌ಗಳನ್ನು ದಾಖಲಿಸಿದ್ದಸಿಬಿಐ, ಹೆಚ್ಚುವರಿ ಚಾರ್ಜ್‌ಶೀಟ್‌ಗಳ ಸಲ್ಲಿಕೆಗಾಗಿ ಹಗರಣದ ವಿಸ್ತೃತ ತನಿಖೆ ಆರಂಭಿಸಿತ್ತು. ಸಚಿವಾಲಯದಲ್ಲಿನ ಲಂಚದ ಜಾಲ, ಹಣಕಾಸು ವಹಿವಾಟು ವಿವರ, ಕರೆ ಆಲಿಕೆಗಳ ದತ್ತಾಂಶ,ಆರೋಪಿಗಳ ನಡುವಿನ ವಾಟ್ಸ್‌ಆ್ಯಪ್‌ ಸಂಭಾಷಣೆ, 12 ಪೆನ್ ಡ್ರೈವ್‌ಗಳು, 50 ಮೊಬೈಲ್ ಫೋನ್‌ಗಳನ್ನು ಸಿಬಿಐ ವಶಪಡಿಸಿಕೊಂಡಿದೆ.

ಲಂಚದ ಜಾಲ ಸಕ್ರಿಯವಾಗಿರುವ ಮಾಹಿತಿ ಗೃಹ ಸಚಿವಾಲಯಕ್ಕೆ ಸಿಗುತ್ತಿದ್ದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಬಿಐ ತನಿಖೆಗೆ ಸೂಚಿಸಿದ್ದರು. ತಾಂತ್ರಿಕ ಕಣ್ಗಾವಲಿರಿಸಲು ಸಿಬಿಐ ನಿರ್ದೇಶಕರಿಗೆ, ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್‌ ಅವರೂ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.