ADVERTISEMENT

ಇದು ಸಮಾನತೆ ಕಡೆಗೆ ಮೊದಲ ಹೆಜ್ಜೆ ಎನ್ನುತ್ತಾರೆ ಅಯ್ಯಪ್ಪ ದರ್ಶನ ಮಾಡಿದ ಬಿಂದು

ಇ.ಟಿ.ಬಿ ಶಿವಪ್ರಿಯನ್‌
Published 2 ಜನವರಿ 2019, 8:43 IST
Last Updated 2 ಜನವರಿ 2019, 8:43 IST
   

ಚೆನ್ನೈ: ‘ಲಿಂಗ ಸಮಾನತೆಯೆಡೆಗೆ ಇದು ಮೊದಲು ಹೆಜ್ಜೆ. ನನಗೆ ತುಂಬಾ ಖುಷಿಯಾಗುತ್ತಿದೆ...’ – ಇದು ಶಬರಿಮಲೆ ದೇಗುಲ ಪ್ರವೇಶಿಸಿದ ಮೊದಲ ಮಹಿಳೆ ಬಿಂದು ಅಮ್ಮಿನಿ ಅವರ ಮಾತು.

ತಾವು ಶಬರಿಮಲೆ ದೇಗುಲಕ್ಕೆ ತೆರಳಿದ ಅನುಭವವನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಳ್ಳುವಾಗಲೂ ಅವರ ದನಿಯಲ್ಲಿ ಖುಷಿಯ ಭಾವ ಇತ್ತು. ಬಿಂದು ಮತ್ತು ಕನಕದುರ್ಗಾ ಅವರಿಬ್ಬರಿಗೂ ಸುಮಾರು 40 ವರ್ಷ ವಯಸ್ಸು. ಸುರಕ್ಷತೆ ದೃಷ್ಟಿಯಿಂದ ಪ್ರಸ್ತುತ ರಹಸ್ಯ ಸ್ಥಳವೊಂದರಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ.

ಬಿಂದು ಅಮ್ಮಿನಿ ಅವರ ಮಾತಿನ ಸಂಗ್ರಹ ರೂಪ ಇಲ್ಲಿದೆ...

ADVERTISEMENT

‘ಶಬರಿಮಲೆದೇಗುಲಕ್ಕೆ ತೆರಳಬೇಕೆಂದಿದ್ದೇವೆ. ನಿಮ್ಮ ಸಹಾಯ ಬೇಕು ಎಂದು ಮಂಗಳವಾರ ಮುಂಜಾನೆ ನಾನು ಮತ್ತು ಕನಕದುರ್ಗಾ ಪೊಲೀಸರನ್ನು ಕೋರಿದ್ದೆವು. ಪೊಲೀಸರು ಸಹಾಯ ಮಾಡುವ ಭರವಸೆ ನೀಡಿದ ನಂತರ ಪಂಪಾದಲ್ಲಿಯೇ ಒಂದಿಡಿ ದಿನ ಉಳಿದುಕೊಂಡೆವು.

‘ಬುಧವಾರ ನಸುಕಿನ 1.30ರಲ್ಲಿ ಶಬರಿಮಲೆಯೆಡೆಗೆ ಯಾತ್ರೆ ಆರಂಭಿಸಿದೆವು. ಅಯ್ಯಪ್ಪನ ಸನ್ನಿಧಾನ ತಲುಪಿದಾಗ ಸುಮಾರು 3.30. ಅಯ್ಯಪ್ಪನ ಎದುರು ನಿಂತು ಕಣ್ಣು ಮುಚ್ಚಿ ಪ್ರಾರ್ಥಿಸಿದಾಗ ಬದುಕು ಧನ್ಯ ಎನಿಸಿತ್ತು. ಪುರುಷ ಭಕ್ತರೊಂದಿಗೆ ಬೆಟ್ಟ ಇಳಿದೆವು. ನಮಗೆ ಜೀವ ಬೆದರಿಕೆ ಇದ್ದ ಕಾರಣ,ಪಂಪಾ ತಲುಪಿದ ನಂತರ ಭದ್ರತೆಯ ಕಾರಣಕ್ಕೆ ಪೊಲೀಸರು ನಮ್ಮನ್ನು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದರು.

‘ಪೊಲೀಸರು ಎಲ್ಲ ರೀತಿಯ ಸಹಕಾರ ನೀಡಿದರು. 4 ಕಿ.ಮೀ. ಅಂತರವನ್ನು ಕಾಲ್ನಡಿಗೆಯಲ್ಲಿ ಸವೆಸುವಾಗಲೂ ಪುರುಷ ಭಕ್ತರಿಂದ ಪ್ರತಿರೋಧ ಬರಲಿಲ್ಲ. ನಾವು ಇಡುಮುಡಿ ಹೊತ್ತಿರಲಿಲ್ಲವಾದ ಕಾರಣ 18 ಪವಿತ್ರ ಮೆಟ್ಟಿಲು ಹತ್ತಲಿಲ್ಲ. ದೇವರ ದರ್ಶನ ಮಾಡಿದ್ದುಧನ್ಯ ಕ್ಷಣ.ನನಗಂತೂ ತುಂಬಾ ಸಂತೋಷವಾಗುತ್ತಿದೆ. ಶಬರಿಮಲೆ ದೇಗುಲದಲ್ಲಿ ಲಿಂಗ ಸಮಾನತೆ ಎಡೆಗೆ ಇದು ಮೊದಲ ಹೆಜ್ಜೆ. ಇದು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.