ADVERTISEMENT

ಝಾಕಿರ್‌ ನಾಯ್ಕ್‌ಗೆ ಆಹ್ವಾನ: ಫಿಫಾ ವಿಶ್ವಕಪ್‌ ಬಹಿಷ್ಕಾರಕ್ಕೆ ಬಿಜೆಪಿ ನಾಯಕ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2022, 9:14 IST
Last Updated 22 ನವೆಂಬರ್ 2022, 9:14 IST
ಝಾಕಿರ್‌ ನಾಯ್ಕ್ (ಕಡತ ಚಿತ್ರ)
ಝಾಕಿರ್‌ ನಾಯ್ಕ್ (ಕಡತ ಚಿತ್ರ)   

ಪಣಜಿ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ, ಝಾಕಿರ್‌ ನಾಯ್ಕ್‌ರನ್ನು ಫಿಫಾ ವಿಶ್ವಕಪ್‌ಗೆ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕತಾರ್‌ನ ಈ ನಡೆಯನ್ನು ವಿರೋಧಿಸಿ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಬಹಿಷ್ಕರಿಸಿ ಎಂದು ಗೋವಾ ಬಿಜೆಪಿ ವಕ್ತಾರ, ಸಾವಿಯೋ ರೋಡ್ರಿಗಸ್‌ ಕರೆ ನೀಡಿದ್ದಾರೆ.

ಫಿಫಾ ‍ವಿಶ್ವಕಪ್‌ ಪಂದ್ಯಾವಳಿ ವೇಳೆ, ಇಸ್ಲಾಮಿಕ್‌ ಚಿಂತನೆಗಳ ಬಗ್ಗೆ ಭಾಷಣ ಮಾಡಲು ಝಾಕಿರ್‌ ನಾಯ್ಕ್‌ ಅವರಿಗೆ ಕತಾರ್‌ ಆಹ್ವಾನ ನೀಡಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ADVERTISEMENT

‘ಜಗತ್ತು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವಾಗ, ಉಗ್ರವಾದಿಗಳ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿಯನ್ನು ಕರೆಸಿ ದ್ವೇಷ ಹರಡಲಾಗುತ್ತಿದೆ‘ ಎಂದು ಸಾವಿಯೋ ರೋಡ್ರಿಗಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಫಿಪಾ ವಿಶ್ವಕಪ್‌ ಪಂದ್ಯಾವಳಿ ಒಂದು ಜಾಗತಿಕ ಕ್ರೀಡಾಕೂಟ. ಇದನ್ನು ವೀಕ್ಷಿಸಲು ಜಗತ್ತಿನ ವಿವಿಧ ಮೂಲೆಗಳಿಂದ ಜನ ಆಗಮಿಸುತ್ತಾರೆ. ಲಕ್ಷಾಂತರ ಜನ ಟಿ.ವಿ ಹಾಗೂ ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಾರೆ. ಇಡೀ ಜಗತ್ತು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವಾಗ, ಝಾಕಿರ್‌ ನಾಯಕ್‌ಗೆ ಅವಕಾಶ ಕೊಡುವುದು, ಮೂಲಭೂತವಾದ ಹಾಗೂ ದ್ವೇಷ ಹರಡುವ ಭಯೋತ್ಪಾದಕರಿಗೆ ಅವಕಾಶ ಕೊಡುವುದಕ್ಕೆ ಸಮ‘ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ, ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವುದಕ್ಕೆ ಬೆಂಬಲವಾಗಿ, ವಿಶ್ವಕಪ್ ಅನ್ನು ಬಹಿಷ್ಕಾರ ಮಾಡಬೇಕು ಎಂದು ಅವರು ಭಾರತೀಯರು ಹಾಗೂ ಉಗ್ರವಾದದಿಂದ ಸಂತ್ರಸ್ತರಾದ ದೇಶದ ಜನರಿಗೆ ಮನವಿ ಮಾಡಿದ್ದಾರೆ.

ಭಾರತೀಯ ಫುಟ್‌ಬಾಲ್‌ ಒಕ್ಕೂಟ ಹಾಗೂ ಕತಾರ್‌ಗೆ ತೆರಳುವ ಭಾರತೀಯ ಕ್ರೀಡಾ ಪ್ರೇಮಿಗಳು ಕೂಡ ಫಿಫಾ ವಿಶ್ವಕಪ್‌ ಅನ್ನು ಬಹಿಷ್ಕರಿಸಿ ಎಂದು ಅವರು ಕೆರೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.