ADVERTISEMENT

ಆರ್ಥಿಕತೆ ಕುಂಠಿತ: ಡೀಸೆಲ್ ಬಳಕೆ ಭಾರಿ ಕುಸಿತ

ತಯಾರಿಕಾ, ನಿರ್ಮಾಣ, ಸಾರಿಗೆ ಮತ್ತು ಕೃಷಿ ವಲಯಗಳಲ್ಲಿ ಇಂಧನ ಬೇಡಿಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 1:30 IST
Last Updated 17 ನವೆಂಬರ್ 2019, 1:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ/ರಾಯಿಟರ್ಸ್‌):ದೇಶದಲ್ಲಿ ಡೀಸೆಲ್ ಬಳಕೆಯು ತೀವ್ರ ಪ್ರಮಾಣದಲ್ಲಿ ಕುಸಿದಿದೆ. 2019ರ ಮೇತಿಂಗಳಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಾಸಿಕ ಡೀಸೆಲ್ ಮಾರಾಟ ಪ್ರಮಾಣ ಶೇ 25.1ರಷ್ಟು ಕುಸಿದಿದೆ.

ದೇಶದಲ್ಲಿ ಬಿಕರಿಯಾಗುವ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಡೀಸೆಲ್‌ನದ್ದೇ ಅತ್ಯಧಿಕ ಪಾಲು. ಭಾರತದ ತಯಾರಿಕಾ ವಲಯ, ಸಾರಿಗೆ ವಲಯ ಮತ್ತು ಕೃಷಿ ಕ್ಷೇತ್ರದಲ್ಲಿ ಡೀಸೆಲ್ ಬಳಕೆ ಪ್ರಮಾಣ ಅತ್ಯಧಿಕ. ‘ಈ ಕ್ಷೇತ್ರಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂಬುದನ್ನು, ಡೀಸೆಲ್‌ಗೆ ಬೇಡಿಕೆ ಕುಸಿದಿರುವುದು ತೋರಿಸುತ್ತದೆ. ದೇಶದ ಆರ್ಥಿಕತೆಯು ಕುಂಟುತ್ತಿರುವ ಕಾರಣ ಡೀಸೆಲ್‌ಗೆ ಬೇಡಿಕೆ ಕುಸಿದಿದೆ’ ಎಂದು ತಜ್ಞರು ಹೇಳಿದ್ದಾರೆ.

ಇದೇ ಅವಧಿಯಲ್ಲಿ ದೇಶದ ಡೀಸೆಲ್ ರಫ್ತು ಪ್ರಮಾಣ ಹೆಚ್ಚಳವಾಗಿದೆ. ಆಗಸ್ಟ್‌ಗೆ ಹೋಲಿಸಿದರೆ, ಸೆಪ್ಟೆಂಬರ್‌
ನಲ್ಲಿ 11.2 ಲಕ್ಷ ಟನ್‌ನಷ್ಟು ಡೀಸೆಲ್ ಅನ್ನು ಹೆಚ್ಚುವರಿಯಾಗಿ ರಫ್ತು ಮಾಡಲಾಗಿದೆ. ಬೇಡಿಕೆ ಕುಸಿದಿರುವ ಕಾರಣ, ದೇಶದಲ್ಲಿ ಡೀಸೆಲ್ ದಾಸ್ತಾನು ಏರಿಕೆಯಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ರಫ್ತು ಮಾಡಬೇಕಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

2020ರ ಮಾರ್ಚ್‌ವರೆಗೆ ಅಧಿಕ ಪ್ರಮಾಣದಲ್ಲಿ ಡೀಸೆಲ್ ರಫ್ತು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌) ಹೇಳಿದೆ.

‘ನಮ್ಮ ಒಟ್ಟು ವಹಿವಾಟಿನಲ್ಲಿ ಡೀಸೆಲ್‌ನ ಪ್ರಮಾಣ ಶೇ 50ರಷ್ಟಿದೆ.ದೇಶಿ ಮಾರುಕಟ್ಟೆಯಲ್ಲಿ ಡೀಸೆಲ್‌ಗೆ ಬೇಡಿಕೆ ಕುಸಿಯುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಕುಸಿದರೆ, ಅನಿವಾರ್ಯವಾಗಿ ರಫ್ತು ಮಾಡಬೇಕಾಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ನಾವು 2 ಲಕ್ಷ ಟನ್‌ ಡೀಸೆಲ್ ರಫ್ತು ಮಾಡಿದ್ದೇವೆ’ ಎಂದು ಬಿಪಿಸಿಎಲ್‌ ಆರ್ಥಿಕ ವಿಭಾಗದ ನಿರ್ದೇಶಕ ಎನ್‌.ವಿಜಯಗೋಪಾಲ್ ಮಾಹಿತಿ ನೀಡಿದ್ದಾರೆ.

‘ತಕ್ಷಣದಲ್ಲಿ ಬೇಡಿಕೆ ಏರಿಕೆ ಆಗುವ ಯಾವ ಸೂಚನೆಯೂ ಇಲ್ಲ. ಹೀಗಾಗಿ ಡೀಸೆಲ್ ರಫ್ತು ಮಾಡಲು ಟೆಂಡರ್ ಕರೆದಿದ್ದೇವೆ’ ಎಂದು ವಿಜಯಗೋಪಾಲ್ ತಿಳಿಸಿದ್ದಾರೆ.

‘ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಮೊದಲು, ವಿದೇಶಿ ಖಾಸಗಿ ಕಂಪನಿಗಳಿಂದ ಕಚ್ಚಾತೈಲ ಮತ್ತು ಡೀಸೆಲ್ ಖರೀದಿಸುತ್ತಿದ್ದವು. ಆದರೆ, ಈಗ ಡೀಸೆಲ್‌ ಅನ್ನು ರಫ್ತು ಮಾಡುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಮಂಗಳೂರು ಸಂಸ್ಕರಣ ಮತ್ತು ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌ ತಮ್ಮ ಡೀಸೆಲ್ ರಫ್ತನ್ನು ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಮಾಡಿವೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಡೀಸೆಲ್ ಬಳಕೆ ಇಳಿಕೆ

2019ರ ಮೇ ತಿಂಗಳಲ್ಲಿ ಡೀಸೆಲ್ ಬಳಕೆ ಪ್ರಮಾಣ ಏರಿಕೆಯಾಗಿದೆ. ಆದರೆ ನಂತರದ ತಿಂಗಳುಗಳಲ್ಲಿ ಅದು ಇಳಿಕೆಯಾಗಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಡೀಸೆಲ್ ಬಳಕೆ ಪ್ರಮಾಣ 10.08 ಟನ್‌ನಷ್ಟು ಕುಸಿದಿದೆ

* ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ವಾಹನಗಳ ಮಾರಾಟ ಶೇ 39ರಷ್ಟು ಕುಸಿತ ಕಂಡಿತ್ತು. ಡೀಸೆಲ್‌ ಬೇಡಿಕೆ ಏರಿಕೆ ಪ್ರಮಾಣ ಕುಸಿತಕ್ಕೆ ಇದು ಪ್ರಮುಖ ಕಾರಣ

* ಡೀಸೆಲ್‌ನ ಚಿಲ್ಲರೆ ದರ ಏರಿಕೆ ಆದ ಕಾರಣ ಸರಕು ಸಾಗಣೆ ವೆಚ್ಚ ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಾಗಿ ಸರಕುಸಾಗಣೆ ಸೇವಾದಾರರು ಟ್ರಕ್‌ಗಳಲ್ಲಿ ಸಾಗಣೆ ಬದಲಿಗೆ, ರೈಲಿನಲ್ಲಿ ಸಾಗಣೆ ಮಾಡಲು ಮುಂದಾಗಿದ್ದಾರೆ. ಡೀಸೆಲ್‌ಗೆ ಬೇಡಿಕೆ ಕುಸಿಯಲು ಇದೂ ಸಹ ಒಂದು ಪ್ರಮುಖ ಕಾರಣ

* ದೇಶದಲ್ಲಿ ನಿರ್ಮಾಣ ಕಾಮಗಾರಿಗಳ ಯಂತ್ರೋಪಕರಣಗಳು ಮತ್ತು ವಾಹನಗಳಲ್ಲಿ ಡೀಸೆಲ್ ಬಳಕೆ ಅಧಿಕ ಪ್ರಮಾಣದಲ್ಲಿದೆ. ಆರ್ಥಿಕ ಹಿಂಜರಿತದ ಕಾರಣ, ನಿರ್ಮಾಣ ವಲಯದಲ್ಲೂ ನಕಾರಾತ್ಮಕ ಪ್ರಗತಿ ಇದೆ. ಈ ವಲಯದಿಂದಲೂ ಡೀಸೆಲ್‌ಗೆ ಬೇಡಿಕೆ ಕುಸಿದಿದೆ

* ತಯಾರಿಕಾ ವಲಯದಲ್ಲಿ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದನೆಗೆ ಡೀಸೆಲ್‌ ಬಳಸಲಾಗುತ್ತದೆ. ತಯಾರಿಕಾ ವಲಯದಲ್ಲೂ ನಕರಾತ್ಮಕ ಪ್ರಗತಿ ಇರುವ ಕಾರಣ ಬೇಡಿಕೆ ಕುಸಿದಿದೆ

* ತಯಾರಿಕಾ ವಲಯ ಮತ್ತು ನಿರ್ಮಾಣ ವಲಯಗಳ ಪ್ರಗತಿ ಕುಂಠಿತವಾಗಿದೆ. ಹೀಗಾಗಿ ಸರಕು ಸಾಗಣೆ ಸೇವೆಗೆ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ಡೀಸೆಲ್‌ಗೆ ಬೇಡಿಕೆ ಕುಸಿದಿದೆ

* ಡೀಸೆಲ್‌ನ ಚಿಲ್ಲರೆ ದರ ಏರಿಕೆಯಾದುದರಿಂದಲೂ, ಡೀಸೆಲ್ ಕಾರುಗಳ ಬಳಕೆ ಕಡಿಮೆಯಾಗಿದೆ. ಹೀಗಾಗಿ ಪೆಟ್ರೋಲ್ ಬಳಕೆ ಏರಿಕೆ ಆಗಿ, ಡೀಸೆಲ್‌ಗೆ ಬೇಡಿಕೆ ಕುಸಿದಿದೆ

* ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ವಾಹನಗಳ ಮಾರಾಟ ಶೇ 39ರಷ್ಟು ಕುಸಿತ ಕಂಡಿತ್ತು. ಡೀಸೆಲ್‌ ಬೇಡಿಕೆ ಏರಿಕೆ ಪ್ರಮಾಣ ಕುಸಿತಕ್ಕೆ ಇದು ಪ್ರಮುಖ ಕಾರಣ

* ಡೀಸೆಲ್‌ನ ಚಿಲ್ಲರೆ ದರ ಏರಿಕೆ ಆದ ಕಾರಣ ಸರಕು ಸಾಗಣೆ ವೆಚ್ಚ ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಾಗಿ ಸರಕುಸಾಗಣೆ ಸೇವಾದಾರರು ಟ್ರಕ್‌ಗಳಲ್ಲಿ ಸಾಗಣೆ ಬದಲಿಗೆ, ರೈಲಿನಲ್ಲಿ ಸಾಗಣೆ ಮಾಡಲು ಮುಂದಾಗಿದ್ದಾರೆ. ಡೀಸೆಲ್‌ಗೆ ಬೇಡಿಕೆ ಕುಸಿಯಲು ಇದೂ ಸಹ ಒಂದು ಪ್ರಮುಖ ಕಾರಣ

* ದೇಶದಲ್ಲಿ ನಿರ್ಮಾಣ ಕಾಮಗಾರಿಗಳ ಯಂತ್ರೋಪಕರಣಗಳು ಮತ್ತು ವಾಹನಗಳಲ್ಲಿ ಡೀಸೆಲ್ ಬಳಕೆ ಅಧಿಕ ಪ್ರಮಾಣದಲ್ಲಿದೆ. ಆರ್ಥಿಕ ಹಿಂಜರಿತದ ಕಾರಣ, ನಿರ್ಮಾಣ ವಲಯದಲ್ಲೂ ನಕಾರಾತ್ಮಕ ಪ್ರಗತಿ ಇದೆ. ಈ ವಲಯದಿಂದಲೂ ಡೀಸೆಲ್‌ಗೆ ಬೇಡಿಕೆ ಕುಸಿದಿದೆ

* ತಯಾರಿಕಾ ವಲಯದಲ್ಲಿ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದನೆಗೆ ಡೀಸೆಲ್‌ ಬಳಸಲಾಗುತ್ತದೆ. ತಯಾರಿಕಾ ವಲಯದಲ್ಲೂ ನಕರಾತ್ಮಕ ಪ್ರಗತಿ ಇರುವ ಕಾರಣ ಬೇಡಿಕೆ ಕುಸಿದಿದೆ

* ತಯಾರಿಕಾ ವಲಯ ಮತ್ತು ನಿರ್ಮಾಣ ವಲಯಗಳ ಪ್ರಗತಿ ಕುಂಠಿತವಾಗಿದೆ. ಹೀಗಾಗಿ ಸರಕು ಸಾಗಣೆ ಸೇವೆಗೆ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ಡೀಸೆಲ್‌ಗೆ ಬೇಡಿಕೆ ಕುಸಿದಿದೆ

* ಡೀಸೆಲ್‌ನ ಚಿಲ್ಲರೆ ದರ ಏರಿಕೆಯಾದುದರಿಂದಲೂ, ಡೀಸೆಲ್ ಕಾರುಗಳ ಬಳಕೆ ಕಡಿಮೆಯಾಗಿದೆ. ಹೀಗಾಗಿ ಪೆಟ್ರೋಲ್ ಬಳಕೆ ಏರಿಕೆ ಆಗಿ, ಡೀಸೆಲ್‌ಗೆ ಬೇಡಿಕೆ ಕುಸಿದಿದೆ.

ಡೀಸೆಲ್ ರಫ್ತು ಏರಿಕೆ

2019–20ನೇ ಆರ್ಥಿಕ ವರ್ಷದ ಮೊದಲ ತಿಂಗಳಿನಿಂದಲೂ ಡೀಸೆಲ್‌ ರಫ್ತು ಪ್ರಮಾಣ ಏರಿಕೆಯಾಗುತ್ತಲೇ ಇದೆ. ಏಪ್ರಿಲ್, ಮೇ, ಜೂನ್‌ನಲ್ಲಿ ಏರಿಕೆ ನಿಧಾನಗತಿಯಲ್ಲಿದೆ. ಆದರೆ ಜುಲೈ ಮತ್ತು ನಂತರದ ದಿನಗಳಲ್ಲಿ ಏರಿಕೆ ಪ್ರಮಾಣ ತೀವ್ರಗತಿ ಪಡೆದಿದೆ. ದೇಶಿ ಮಾರುಕಟ್ಟೆಯಲ್ಲಿ ಡೀಸೆಲ್‌ಗೆ ಬೇಡಿಕೆ ಕುಸಿದಿದೆ. ಹೀಗಾಗಿ ಉತ್ಪಾದಕರ ಬಳಿ ದಾಸ್ತಾನು ಏರಿಕೆ ಆಗುತ್ತಿದೆ. ದಾಸ್ತಾನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಡೀಸೆಲ್‌ ಅನ್ನು ರಫ್ತು ಮಾಡುವ ಅನಿವಾರ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ

ಏಪ್ರಿಲ್ 20.17 ಲಕ್ಷ ಟನ್

ಮೇ 21.01 ಲಕ್ಷ ಟನ್

ಜೂನ್ 22.20ಲಕ್ಷ ಟನ್

ಜುಲೈ 26.14 ಲಕ್ಷ ಟನ್

ಆಗಸ್ಟ್ 23.57ಲಕ್ಷ ಟನ್

ಸೆಪ್ಟೆಂಬರ್ 34.76ಲಕ್ಷ ಟನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.