ADVERTISEMENT

ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಿದೆ: ಕಾಂಗ್ರೆಸ್‌

ಪಿಟಿಐ
Published 4 ಸೆಪ್ಟೆಂಬರ್ 2020, 10:58 IST
Last Updated 4 ಸೆಪ್ಟೆಂಬರ್ 2020, 10:58 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗಿದೆ. ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಮಾಧ್ಯಮಗಳ ವರದಿಯ ಪ್ರಕಾರ ಆಗಸ್ಟ್‌ನಲ್ಲಿ ನಿರುದ್ಯೋಗಿಗಳ ಪ್ರಮಾಣ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳಿಲ್ಲ. ಸರ್ಕಾರ ಉದ್ಯೋಗಾವಕಾಶಗಳನ್ನು ಮರುಸೃಷ್ಟಿಸಬೇಕು ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನಿರುದ್ಯೋಗ ಮತ್ತು ಖಾಸಗೀಕರಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ‘ಕಂಬೈಂಡ್‌ ಗ್ರಾಜುಯೆಟ್‌ ಲೆವೆಲ್‌ ಎಕ್ಸಾಂ’ (ಸಿಜಿಎಲ್‌)ಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರಿಯಾಂಕ ಅವರು ಆರೋಪಿಸಿದ್ದಾರೆ.

‘2017ರಿಂದ ಎಸ್‌ಎಸ್‌ಸಿಯು ‘ಸಿಜಿಲ್’ ಅಡಿಯಲ್ಲಿ ಯಾವುದೇ ನೇಮಕಾತಿಯನ್ನು ಪೂರ್ಣಗೊಳಿಸಿಲ್ಲ. 2018ರ ‘ಸಿಜಿಲ್’‌ ಪರೀಕ್ಷೆಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. 2019ರ ‘ಸಿಜಿಎಲ್’‌ ಪರೀಕ್ಷೆಗಳು ಇನ್ನೂ ನಡೆದಿಲ್ಲ. 2020ರಲ್ಲಿ ಎಸ್‌ಎಸ್‌ಸಿಯು ಸಿಜಿಎಲ್‌ ಅಡಿ ಯಾವುದೇ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಿಲ್ಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಸರ್ಕಾರವು ಖಾಸಗೀಕರಣವನ್ನು ನಿಲ್ಲಿಸಬೇಕು. ಉದ್ಯೋಗಗಳಿಲ್ಲದೆ ಯುವಕರ ಭವಿಷ್ಯ ಹಾಳಾಗುತ್ತಿದೆ. ಸರ್ಕಾರವು ಸತ್ಯವನ್ನು ಮುಚ್ಚಿಡಲು ಜಾಹೀರಾತು ಮತ್ತು ಭಾಷಣಗಳಲ್ಲಿ ಸುಳ್ಳು ಹೇಳುತ್ತಿದೆ’ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಹ ಬಡತನದ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಭಾರತೀಯ ಮಹಿಳೆಯರಲ್ಲಿ ಬಡತನ ಹೆಚ್ಚಿದೆ ಎಂದುವಿಶ್ವಸಂಸ್ಥೆ ಹೇಳಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.