ADVERTISEMENT

ದೇಶ ವಿರೋಧಿ ಪೋಸ್ಟ್: 40 ಸೋಶಿಯಲ್ ಮೀಡಿಯಾ ಖಾತೆ ವಿರುದ್ಧ FIR; 26 ಜನರ ಬಂಧನ

ಪಿಟಿಐ
Published 13 ಮೇ 2025, 16:09 IST
Last Updated 13 ಮೇ 2025, 16:09 IST
FIR.
FIR.   

ಲಖನೌ: ದೇಶ ವಿರೋಧಿ ಕಂಟೆಂಟ್‌ಗಳ ಪ್ರಸಾರ ಮತ್ತು ದಾರಿತಪ್ಪಿಸುವ ಪೋಸ್ಟ್ ಹಾಕಿದ್ದ ಆರೋಪದ ಮೇಲೆ 40 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ, ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಆನ್‌ಲೈನ್‌ನಲ್ಲಿ ಸುಳ್ಳು ಅಥವಾ ಪ್ರಚೋದನಕಾರಿ ಮಾಹಿತಿಯನ್ನು ಪ್ರಸಾರ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ಅವರ ನಿಕಟ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವು ಪೊಲೀಸ್ ಪ್ರಧಾನ ಕಚೇರಿಯ ಸಾಮಾಜಿಕ ಮಾಧ್ಯಮ ಕೇಂದ್ರದಿಂದ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ದಿನದ 24 ಗಂಟೆಗಳ ಕಾಲ ನಿಗಾ ವಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಇದುವರೆಗೆ, 40 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ನಡೆಸುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಟ್ಟು 25 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಸೈಬರ್ ಅಪರಾಧ ಪ್ರಧಾನ ಕಚೇರಿಯ ಮೂಲಕ ಎಲ್ಲ 40 ಖಾತೆಗಳನ್ನು ನಿರ್ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ತಿಳಿಸಿದೆ.

ಜನರನ್ನು ಭಯಭೀತರನ್ನಾಗಿಸುವ, ನಾಗರಿಕರ ದಾರಿ ತಪ್ಪಿಸುವ ಅಥವಾ ಭಾರತೀಯ ಸೇನೆಯ ಪ್ರತಿಷ್ಠೆಗೆ ಕಳಂಕ ತರುವ ಯಾವುದೇ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಡಿಜಿಪಿ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಎಕ್ಸ್‌ನಲ್ಲಿ ಉತ್ತರ ಪ್ರದೇಶ ಪೊಲೀಸರ ಅಧಿಕೃತ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಮೂಲಕ ಯಾವುದೇ ಸುದ್ದಿ, ಚಿತ್ರಗಳು ಅಥವಾ ವಿಡಿಯೊಗಳನ್ನು ಪರಿಶೀಲಿಸುವಂತೆ ಅವರು ಜನರನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ದಾರಿತಪ್ಪಿಸುವ, ಸುಳ್ಳು ಅಥವಾ ರಾಷ್ಟ್ರವಿರೋಧಿ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದು ಅಥವಾ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.