ADVERTISEMENT

ಪ್ರಕರಣ ದಾಖಲಿಸಲು ಪಿತೂರಿ: ನಿವೃತ್ತ ಡಿಜಿಪಿ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

ಪಿಟಿಐ
Published 10 ಜನವರಿ 2026, 16:34 IST
Last Updated 10 ಜನವರಿ 2026, 16:34 IST
ರಶ್ಮಿ ಶುಕ್ಲಾ
ರಶ್ಮಿ ಶುಕ್ಲಾ   

ಮುಂಬೈ: ದೇವೇಂದ್ರ ಫಡಣವೀಸ್‌ ಮತ್ತು ಏಕನಾಥ್‌ ಶಿಂಧೆ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್‌ ಪಾಂಡೆ ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮಹಾರಾಷ್ಟ್ರದ ನಿವೃತ್ತ ಡಿಜಿಪಿ ರಶ್ಮಿ ಶುಕ್ಲಾ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ವಿಚಾರಣೆಯ ಆಧಾರದ ಮೇಲೆ ರಶ್ಮಿ ಅವರು ಜನವರಿ 3ರಂದು ನಿವೃತ್ತರಾಗುವ ಮೊದಲು ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

2016ರಲ್ಲಿ ಠಾಣೆ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದ ಮರು ತನಿಖೆ ಮಾಡುವ ಮೂಲಕ ಅಂದಿನ ಡಿಜಿಪಿ ಸಂಜಯ್‌ ಪಾಂಡೆ, ಡಿಸಿಪಿ ಲಕ್ಷ್ಮೀಕಾಂತ್‌ ಪಾಟೀಲ್‌ ಮತ್ತು ಎಸಿಪಿ ಸರ್ದಾರ್‌ ಪಾಟೀಲ್‌ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ (ಆಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು) ಮತ್ತು ಪ್ರಸ್ತುತ ಉಪ ಮುಖ್ಯಮಂತ್ರಿ ಶಿಂಧೆ (ಆಗ ಸಚಿವರಾಗಿದ್ದರು) ಅವರನ್ನು ಸಿಲುಕಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ. ಈ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ರಶ್ಮಿ ಶಿಫಾರಸು ಮಾಡಿದ್ದಾರೆ.

ADVERTISEMENT

2016ರಲ್ಲಿ ಶ್ಯಾಮ್‌ಸುಂದರ್‌ ಅಗರ್ವಾಲ್‌ ಮತ್ತು ಅವರ ಮಾಜಿ ವ್ಯವಹಾರ ಪಾಲುದಾರ, ರಿಯಲ್‌ ಎಸ್ಟೇಟ್‌ ಡೆವಲಪರ್‌ ಸಂಜಯ್‌ ಪುನಾಮಿಯಾ ನಡುವೆ ವಿವಾದ ಉಂಟಾದ ನಂತರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2017ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಪಾಂಡೆ ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಲು ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.