ADVERTISEMENT

ರಾಮಚರಿತ ಮಾನಸ ವಿವಾದ: ಎಸ್‌‍ಪಿ ನಾಯಕ ಮೌರ್ಯ ವಿರುದ್ಧ ಎಫ್‌ಐಆರ್‌

ಪಿಟಿಐ
Published 3 ಫೆಬ್ರುವರಿ 2023, 11:16 IST
Last Updated 3 ಫೆಬ್ರುವರಿ 2023, 11:16 IST
ಸ್ವಾಮಿ ಪ್ರಸಾದ್‌ ಮೌರ್ಯ
ಸ್ವಾಮಿ ಪ್ರಸಾದ್‌ ಮೌರ್ಯ   

ಗ್ವಾಲಿಯರ್‌: ‘ಹಿಂದೂ ಮಹಾಕಾವ್ಯ ‘ರಾಮಚರಿತ ಮಾನಸ’ವನ್ನು ಟೀಕಿಸಿದ ಆರೋಪಕ್ಕಾಗಿ ಉತ್ತರ ಪ್ರದೇಶದ ಮಾಜಿ ಸಚಿವ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರ ವಿರುದ್ಧ ಮಧ್ಯಪ್ರದೇಶದ ಗ್ವಾಲಿಯರ್‌ನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

‘ಹಿಂದೂ ಮಹಾಸಭಾ ನೀಡಿದ ದೂರಿನ ಆಧಾರದ ಮೇರೆಗೆ ಗುರುವಾರ ಎಫ್‌ಐಆರ್‌ ದಾಖಲಿಸಲಾಗಿದೆ. ಮೌರ್ಯ ಅವರು ಸೇರಿದಂತೆ ಇನ್ನೂ ಎಂಟು ಮಂದಿಯ ಹೆಸರನ್ನೂ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ’ ಎಂದರು.

‘ರಾಮಚರಿತಮಾನಸದ ಕೆಲವು ಸಾಲುಗಳು ಜಾತಿಯನ್ನು ಆಧಾರವಾಗಿಟ್ಟುಕೊಂಡು ಸಮಾಜದ ದೊಡ್ಡ ವರ್ಗವೊಂದನ್ನು ಅವಮಾನಿಸುತ್ತವೆ. ಆದ್ದರಿಂದ ಈ ಸಾಲುಗಳಿಗೆ ನಿಷೇಧ ಹೇರಬೇಕು’ ಎಂದು ಮೌರ್ಯ ಅವರು ಇತ್ತೀಚೆಗೆ ಹೇಳಿದ್ದರು.

ADVERTISEMENT

ರಾಮಾಯಣದ ಆಧಾರವಾಗಿಟ್ಟುಕೊಂಡು, 16ನೇ ಶತಮಾನದ ಭಕ್ತಿ ಚಳವಳಿಯ ಕವಿ ತುಳಸಿದಾಸ ಅವರು ರಾಮಚರಿತಮಾನಸ ಮಹಾಕಾವ್ಯವನ್ನು ಅವಧಿ ಭಾಷೆಯಲ್ಲಿ ರಚಿಸಿದ್ದಾರೆ.

‘ಹಿಂದೂ ಮಹಾಸಭಾ ದೂರಿನನ್ವಯ ಈ ಪ್ರಕರಣವನ್ನು ತನಿಖೆಗಾಗಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದು ಗ್ವಾಲಿಯರ್‌ನ ಎಸ್‌ಪಿ ಅಮಿತ್‌ ಸಂಘಿ ಅವರು ಹೇಳಿದರು.

‘ಆರೋಪಿಗಳನ್ನು ಮಹಾಶಿವರಾತ್ರಿಯ ವೇಳೆಗೆ (ಫೆ. 19) ಬಂಧಿಸದಿದ್ದರೆ ಹೃಷಿಕೇಶದಲ್ಲಿನ ಸಂಘಟನಾ ಸಭೆಯ ನಂತರ ಈ ಕುರಿತು ಆಂದೋಲನವನ್ನು ತೀವ್ರಗೊಳಿಸಲಾಗುವುದು’ ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಜೈವೀರ್‌ ಭಾರದ್ವಾಜ್ ತಿಳಿಸಿದರು.‌

ಎಫ್‌ಐಆರ್‌ ದಾಖಲಾದ ಬಳಿಕ, ಒಬಿಸಿ ಮಹಾಸಭಾವು ಸ್ವಾಮಿ ಪ್ರಸಾದ್‌ ಮೌರ್ಯ ಅವರ ಬೆಂಬಲಕ್ಕೆ ನಿಂತಿದ್ದು, ಮೌರ್ಯ ಅವರನ್ನು ಅಪಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.