ನವದೆಹಲಿ: 2019ರಲ್ಲಿ ದೆಹಲಿಯಲ್ಲಿ ಬೃಹತ್ ಗಾತ್ರದ ಬ್ಯಾನರ್‌ಗಳನ್ನು ಸಾರ್ವಜನಿಕವಾಗಿ ಅಳವಡಿಸುವ ಮೂಲಕ ಜನರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೆಚ್ಚುವರಿ ಮುಖ್ಯ ನ್ಯಾಯಾಧೀಶ ನೀಹಾ ಮಿತ್ತಲ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ವಿಷಯವನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
ಪೊಲೀಸರು ಹೆಚ್ಚಿನ ತನಿಖೆಗಾಗಿ ಸಮಯ ಕೋರಿ ಮನವಿ ಸಲ್ಲಿಸಿದ್ದರು. ಹೀಗಾಗಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 18ರಂದು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಲಯ ಮಾರ್ಚ್ 11ರಂದು ಆಸ್ತಿಯ ನಾಶ ತಡೆಗಟ್ಟುವ ಕಾಯ್ದೆಯ ಉಲ್ಲಂಘನೆಯಡಿ ಎಫ್‌ಐಆರ್‌ಗಳನ್ನು ದಾಖಲಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತ್ತು.
ಕೇಜ್ರಿವಾಲ್ ಅಲ್ಲದೆ, ಮಾಜಿ ಶಾಸಕರಾದ ಗುಲಾಬ್ ಸಿಂಗ್ ಮತ್ತು ಮಾಜಿ ದ್ವಾರಕಾ ಪಾಲಿಕೆ ಸದಸ್ಯೆ ನಿತಿಕಾ ಶರ್ಮಾ ವಿರುದ್ಧವೂ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿತ್ತು.
2019ರಲ್ಲಿ ದೂರುದಾರರು, ಸಾರ್ವಜನಿಕವಾಗಿ ಬೃಹತ್ ಗಾತ್ರದ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಹಣವನ್ನು ಹಾಳುಮಾಡಲಾಗಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.