ADVERTISEMENT

ಐಒಸಿ ರಿಫೈನರಿ ಆವರಣದಲ್ಲಿ ಬೆಂಕಿ ಅವಘಡ: ಮೂವರು ಸಾವು, 44 ಮಂದಿಗೆ ಗಾಯ

ಪಿಟಿಐ
Published 21 ಡಿಸೆಂಬರ್ 2021, 14:24 IST
Last Updated 21 ಡಿಸೆಂಬರ್ 2021, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಲ್ದಿಯಾ: ಪಶ್ಚಿಮ ಬಂಗಾಳದ ಪುರ್ಬ್ ಮೇದಿನಿಪುರ ಜಿಲ್ಲೆಯಲ್ಲಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ರಿಫೈನರಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

'ದಿಢೀರನೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ 44 ಜನರಿಗೆ ಸುಟ್ಟ ಗಾಯಗಳಾಗಿವೆ ಹಾಗೂ ದುರಾದೃಷ್ಟವಶಾತ್‌ 3 ಜನರು ಗಾಯಗಳಿಂದಾಗಿ ಸಾವಿಗೀಡಾದರು. ರಿಫೈನರಿಯಲ್ಲಿ ಕಾರ್ಯಾಚರಣೆ ಮುಗಿಸುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ' ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈಗ ಬೆಂಕಿ ನಂದಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಐಒಸಿ ಹೇಳಿದೆ.

ADVERTISEMENT

ಗಾಯಗೊಂಡಿರುವ 44 ಜನರ ಪೈಕಿ 37 ಮಂದಿಯನ್ನು ಕೋಲ್ಕತ್ತ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.