ಕೋಲ್ಕತ್ತ: ಇಲ್ಲಿನ ಭಾರತೀಯ ರೈಲ್ವೆ ಕಚೇರಿ ಇರುವ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸೇರಿದಂತೆ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ.
ಬೆಂಕಿಯನ್ನು ನಂದಿಸುವ ಪ್ರಯತ್ನ, ಬಹುಮಹಡಿ ಕಟ್ಟಡದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವ ಸಂದರ್ಭ ಲಿಫ್ಟ್‌ನ ಒಳ ಸಿಲುಕಿದ ಸಿಬ್ಬಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
‘ಇದು ಅತ್ಯಂತ ದುರದೃಷ್ಟಕರ ಘಟನೆ. ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ನಾಲ್ವರು ಅಗ್ನಿಶಾಕ ದಳದ ಸಿಬ್ಬಂದಿ, ಒಬ್ಬ ಆರ್‌ಪಿಎಫ್ ಸಿಬ್ಬಂದಿ ಹಾಗೂ ಒಬ್ಬರು ಎಎಸ್‌ಐ ಸೇರಿದ್ದಾರೆ. ಮತ್ತೊಬ್ಬರನ್ನು ಇನ್ನೂ ಗುರುತಿಸಲಾಗಿಲ್ಲ’ ಎಂದು ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ ಸಚಿವ ಸುಜಿತ್ ಬಸು ತಿಳಿಸಿದ್ದಾರೆ.
ಸೋಮವಾರ ರಾತ್ರಿ 8.30ರ ವೇಳೆಗೆ ಕಟ್ಟಡದ 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದೂ ಅವರು ತಿಳಿಸಿದ್ದಾರೆ.
‘ಸಿಬ್ಬಂದಿ 13ನೇ ಮಹಡಿಗೆ ಲಿಫ್ಟ್‌ನಲ್ಲಿ ತೆರಳಿದ್ದರು. ಅತಿಯಾದ ಬಿಸಿ ಮತ್ತು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ’ ಎಂದು ಬಸು ಹೇಳಿದ್ದಾರೆ.
ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಮುಖ್ಯಮಂತ್ರಿ ಮಮತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ತಲಾ ₹10 ಲಕ್ಷ ಪರಿಹಾರ ಹಾಗೂ ಸಂಬಂಧಿಯೊಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.