ADVERTISEMENT

ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ:140 ರೋಗಿಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 11:30 IST
Last Updated 28 ಮಾರ್ಚ್ 2021, 11:30 IST
ಕಾನ್ಪುರದ ಎಲ್‌ಪಿಎಸ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕದಿಂದ ಉಂಟಾಗಿರುವ ಹಾನಿಯ ದೃಶ್ಯ –ಪಿಟಿಐ ಚಿತ್ರ
ಕಾನ್ಪುರದ ಎಲ್‌ಪಿಎಸ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕದಿಂದ ಉಂಟಾಗಿರುವ ಹಾನಿಯ ದೃಶ್ಯ –ಪಿಟಿಐ ಚಿತ್ರ   

ಕಾನ್ಪುರ: ‘ಇಲ್ಲಿನ ಸ್ವರೂಪ್ ನಗರದ ಎಲ್‌ಪಿಎಸ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು 140 ರೋಗಿಗಳನ್ನು ರಕ್ಷಿಸಲಾಗಿದೆ’ ಎಂದು ಉತ್ತರ ಪ್ರದೇಶ ಸರ್ಕಾರವು ತಿಳಿಸಿದೆ.

‘ಬೆಳಿಗ್ಗೆ 7.30ರ ಸುಮಾರಿಗೆ ನೆಲಮಹಡಿಯಲ್ಲಿರುವ ಸ್ಟೋರ್‌ರೂಂನಿಂದ ಹೊಗೆ ಬರುತ್ತಿರುವುದು ಕಾಣಿಸಿತು. ಪರಿಶೀಲಿಸಿದಾಗ ಅಗ್ನಿ ಅವಘಡ ಸಂಭವಿಸಿರುವುದು ತಿಳಿಯಿತು ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಪಕ್ಕದ ಕಟ್ಟಡಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ವಿನಯ್ ಕೃಷ್ಣ ವಿವರಿಸಿದರು.

‘ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ 6.30ರ ಸುಮಾರಿಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ. ಆದರೆ, ಇವರು ಅಗ್ನಿ ಅವಘಡದ ಕಾರಣದಿಂದ ಮೃತಪಟ್ಟಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರೋಗಿಗಳ ಆರೈಕೆಗೆ ಸೂಕ್ತವ್ಯವಸ್ಥೆ ಮಾಡಲು ನಿರ್ದೇಶಿಸಿದ್ದು, ಘಟನೆ ಕುರಿತು ಜಿಲ್ಲಾಡಳಿತದಿಂದ ವರದಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.