ADVERTISEMENT

ಭಾರತಕ್ಕೆ ‘ರಫೇಲ್ ಬಲ’

ಫ್ರಾನ್ಸ್‌ನಿಂದ ಹೊರಟ ಮೊದಲ ತಂಡ; ಬುಧವಾರ ಅಂಬಾಲ ವಾಯುನೆಲೆಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST
ರಫೇಲ್
ರಫೇಲ್   

ನವದೆಹಲಿ: ಭಾರತದ ವಾಯುಪಡೆಯ ಸಾಮರ್ಥ್ಯವನ್ನು ಬಲಪಡಿಸಲಿರುವ ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಫ್ರಾನ್ಸ್‌ನಿಂದ ಸೋಮವಾರ ಹೊರಟಿದೆ. 36 ವಿಮಾನಗಳ ಪೈಕಿ ಐದು ವಿಮಾನಗಳು ಭಾರತದ ಅಂಬಾಲದಲ್ಲಿರುವ ವಾಯುನೆಲೆಗೆ ಬುಧವಾರ ಬಂದಿಳಿಯಲಿವೆ. 7,000 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಒಮ್ಮೆ ಮಾತ್ರ ಯುಎಇನಲ್ಲಿ ವಿಮಾನಗಳು ನಿಲುಗಡೆ ಆಗಲಿವೆ.

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ. ಇನ್ನು ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ಲಡಾಖ್‌ನಲ್ಲಿ ಭಾರತ–ಚೀನಾ ನಡುವೆ ಗಡಿ ಸಮಸ್ಯೆ ಉಂಟಾಗಿರುವ ಸಮಯದಲ್ಲೇ, ಬಲಿಷ್ಠ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರುವುದು ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ.ಆಗಸ್ಟ್ ಮಧ್ಯಭಾಗದಲ್ಲಿ ವಿಮಾನಗಳ ಔಪಚಾರಿಕ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ವಾಯುಪಡೆ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಲಡಾಖ್ ಗಡಿಗೆ ‘ರಫೇಲ್‌’?

- ಚೀನಾ ಗಡಿಯ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ವಿಮಾನವನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

- 36 ವಿಮಾನಗಳ ಪೈಕಿ 30 ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ. ಉಳಿದ 6 ವಿಮಾನಗಳು ತರಬೇತಿ ನೀಡಲಿವೆ

- ವಾಯುಪಡೆ ಪೈಲಟ್‌ಗಳು ಹಾಗೂ ಸಹಾಯಕ ಸಿಬ್ಬಂದಿ ವಿಮಾನ ಹಾಗೂ ಅದು ಒಳಗೊಂಡಿರುವ ಶಸ್ತ್ರಾಸ್ತ್ರ ‌ವ್ಯವಸ್ಥೆಯ ಬಗ್ಗೆ ಸಂಪೂರ್ಣ ತರಬೇತಿ ಪಡೆದಿದ್ದಾರೆ

- ರಫೇಲ್ ವಿಮಾನಗಳ ಮತ್ತೊಂದು ಪಡೆಯು ಪಶ್ಚಿಮ ಬಂಗಾಳದ ಹಾಶಿಮಾರ ವಾಯುನೆಲೆಯಲ್ಲಿ ನೆಲೆಗೊಳ್ಳಲಿದ್ದು,ಒಂಬತ್ತು ತಿಂಗಳ ತರಬೇತಿ ಬಳಿಕ ಭಾರತಕ್ಕೆ ಬರಲಿದೆ

- ಅಂಬಾಲ, ಹಾಶಿಮಾರದಲ್ಲಿ ₹400 ಕೋಟಿ ವೆಚ್ಚದಲ್ಲಿ ನಿರ್ವಹಣಾ ಸೌಲಭ್ಯ ಕಲ್ಪಿಸಲಾಗಿದೆ

- ವಿಮಾನಗಳ ಸೇರ್ಪಡೆಗೆ ಸಿದ್ಧತೆ ಪೂರ್ಣಗೊಂಡಿದೆ. ಹಾರಾಟಕ್ಕೆ ಪೈಲಟ್‌ಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ

- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಡಿಸೆಂಬರ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ವೇಳೆಮೊದಲ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರ ಮಾಡಲಾಗಿತ್ತು

- ಭಾರತ–ಫ್ರಾನ್ಸ್ ನಡುವೆ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸುದೀರ್ಘ ಇತಿಹಾಸವಿದೆ. ತೂಫಾನಿಸ್, ಮಿಸ್ಟರೆ, ಜಾಗ್ವಾರ್, ಮಿರಾಜ್ ಯುದ್ಧವಿಮಾನಗ ಬಳಿಕ ಇದೀಗ ಹೊಸ ಸೇರ್ಪಡೆ ರಫೇಲ್

****
ವಿವಾದದ ಸ್ವರೂಪ

ರಫೇಲ್ ಯುದ್ಧವಿಮಾನ ಖರೀದಿ ವಿಚಾರವು ವಿವಾದದ ಸ್ವರೂಪ ಪಡೆದಿದ್ದು 2016ರಲ್ಲಿ. ಹಿಂದಿನ ಯುಪಿಎ ಸರ್ಕಾರವು 126 ರಫೇಲ್ ಖರೀದಿಗೆ ಫ್ರಾನ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರುವಲ್ಲಿ ವಿಳಂಬವಾಯಿತು. ಮೋದಿ ಅವರು ಪ್ರಧಾನಿಯಾದ ಬಳಿಕ ಹಳೆ ಒಪ್ಪಂದ ರದ್ದುಗೊಳಿಸಿ, 36 ವಿಮಾನಗಳ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡರು. ಯುಪಿಎ ಅವಧಿಯಲ್ಲಿ ₹526 ಕೋಟಿಗೆ ಒಂದು ವಿಮಾನ ಎಂದು ನಿಗದಿಯಾಗಿತ್ತು. ಆದರೆ ಎನ್‌ಡಿಎ ಅವಧಿಯಲ್ಲಿ ಅದು ₹1,555 ಕೋಟಿಗೆ ಏರಿತು. ಫ್ರಾನ್ಸ್‌ನ ಡಾಸೋ ಏವಿಯೇಷನ್‌ನ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್‌ ಡಿಫೆನ್ಸ್‌ ಆಯ್ಕೆಯಾಗಿತ್ತು. ₹59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಮಾಲೀಕತ್ವದ ಸಂಸ್ಥೆಯನ್ನು ಸಹಭಾಗಿಯಾಗಿ ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸುತ್ತಿದೆ. ರಫೇಲ್ ದಾಖಲೆಗಳು ಕಳವಾಗಿವೆ ಎಂಬ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು 2019ರ ನವೆಂಬರ್‌ನಲ್ಲಿ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು.

**************

‘ಗೇಮ್ ಚೇಂಜರ್’ ರಫೇಲ್‌

- ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನ ಎಂಬ ಖ್ಯಾತಿ

- ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ

- ಹಲವು ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವಶಕ್ತಿ

- ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಗಳನ್ನು ಉಡ್ಡಯನ ಮಾಡುವಬಲ

- ಒಂದುರಫೇಲ್‌, ವೈರಿಪಡೆಯ ಹಲವು ಯುದ್ಧವಿಮಾನಗಳಿಗೆ ಸಮ

**************

ಉಪಕರಣಗಳು ಏನೇನಿವೆ?

ಆಗಸದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯದಫ್ರೆಂಚ್ ಹ್ಯಾಮರ್ (Highly Agile and Manoeuvrable Munition Extended Range)

- ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ,ಕ್ರೂಸ್ ಕ್ಷಿಪಣಿ

- ಇಸ್ರೇಲ್ ನಿರ್ಮಿತ ಹೆಲ್ಮೆಟ್‌

- ರೇಡಾರ್ ಮುನ್ನೆಚ್ಚರಿಕೆ ರಿಸೀವರ್‌

- ಜಾಮರ್‌

- 10-ಗಂಟೆಗಳ ಹಾರಾಟದ ದತ್ತಾಂಶ ರೆಕಾರ್ಡಿಂಗ್

- ಇನ್ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ

- ಇಸ್ರೇಲ್‌ ಸ್ಪೈಸ್ 2000 ಬಾಂಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.