ADVERTISEMENT

ದೇಶಿಯವಾಗಿ ಅಭಿವೃದ್ಧಿಪಡಿಸಿದ ಸರಕು ಸಾಗಣೆ ರೈಲಿನ ಅಲ್ಯೂಮಿನಿಯಂ ಬೋಗಿಗಳಿಗೆ ಚಾಲನೆ

ಪಿಟಿಐ
Published 16 ಅಕ್ಟೋಬರ್ 2022, 15:08 IST
Last Updated 16 ಅಕ್ಟೋಬರ್ 2022, 15:08 IST

ನವದೆಹಲಿ: ಭಾರತೀಯ ರೈಲ್ವೆಯು ಸರಕು ಸಾಗಣೆ ರೈಲಿನ ಅಲ್ಯೂಮಿನಿಯಂ ಬೋಗಿಗಳನ್ನು (ರೇಕ್‌)ದೇಶಿಯವಾಗಿ ಅಭಿವೃದ್ಧಿಪಡಿಸಿದ್ದು, ಇವುಗಳಿಗೆ ಭಾನುವಾರ ಚಾಲನೆ ನೀಡಲಾಯಿತು.

ಒಡಿಶಾದ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಅಲ್ಯೂಮಿನಿಯಂ ಬೋಗಿಗಳ ಬಳಕೆಗೆ ಹಸಿರು ನಿಶಾನೆ ತೋರಿದರು.

‘ಬೆಸ್ಕೊ ಲಿಮಿಟೆಡ್‌ ಹಾಗೂ ಹಿಂಡಾಲ್ಕೊ ಕಂಪನಿಗಳ ಸಹಯೋಗದಲ್ಲಿ ಈ ಬೋಗಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ಈ ಹಿಂದೆ ಇದ್ದ ಬೋಗಿಗಳಿಗಿಂತಲೂ ಹೆಚ್ಚು ಹಗುರವಾಗಿದ್ದು, ಅಧಿಕ ಸರಕು ಸಾಗಣೆ ಸಾಮರ್ಥ್ಯ ಹೊಂದಿವೆ’ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ADVERTISEMENT

‘ಈ ಹಿಂದೆ ಇದ್ದ ಉಕ್ಕಿನ ಬೋಗಿಗಳಿಗೆ ಹೋಲಿಸಿದರೆಈಗ ಅಭಿವೃದ್ಧಿಪಡಿಸಲಾಗಿರುವ ಅಲ್ಯೂಮಿನಿಯಂ ಬೋಗಿಗಳು ಹೆಚ್ಚುವರಿಯಾಗಿ ಪ್ರತಿ ಟ್ರಿಪ್‌ಗೆ 180 ಟನ್‌ ಸರಕು ಸಾಗಿಸುವ ಸಾಮರ್ಥ್ಯ ಹೊಂದಿವೆ. ಈ ಬೋಗಿಗಳು ತುಕ್ಕು ಹಿಡಿಯುವುದಿಲ್ಲ. ಹೀಗಾಗಿ ನಿರ್ವಹಣಾ ವೆಚ್ಚ ತಗ್ಗಲಿದೆ. ಇವು ಶೇ 80ರಷ್ಟು ಮರು ಮಾರಾಟ ಮೌಲ್ಯವನ್ನು ಹೊಂದಿರಲಿವೆ. ಈ ಹಿಂದೆ ಇದ್ದ ಬೋಗಿಗಳಿಗಿಂತಲೂ 10 ವರ್ಷ ಅಧಿಕ ಬಾಳಿಕೆ ಬರುತ್ತವೆ. ರೈಲು ವೇಗವಾಗಿ ಸಾಗಲು ಇವು ನೆರವಾಗಲಿವೆ. ಇವುಗಳ ನಿರ್ಮಾಣಕ್ಕೆ ತಗಲುವ ವೆಚ್ಚವು ಶೇ 35ರಷ್ಟು ಅಧಿಕವಾಗಿದೆ’ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.