ADVERTISEMENT

ಬಿಜೆಪಿ: ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ 4 ರಾಜ್ಯಗಳಿಗೆ ಹೊಸ ಅಧ್ಯಕ್ಷರ ಆಯ್ಕೆ

ಪಿಟಿಐ
Published 1 ಜುಲೈ 2025, 16:07 IST
Last Updated 1 ಜುಲೈ 2025, 16:07 IST
ಮಹೇಂದ್ರ ಭಟ್ (ಮಧ್ಯದಲ್ಲಿ ಇರುವವರು)  
ಮಹೇಂದ್ರ ಭಟ್ (ಮಧ್ಯದಲ್ಲಿ ಇರುವವರು)      

ನವದೆಹಲಿ: ಪಕ್ಷದ ತೆಲಂಗಾಣ, ಆಂಧ್ರಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರ ಘಟಕಗಳ ನೂತನ ಅಧ್ಯಕ್ಷರನ್ನು ಬಿಜೆಪಿ ಮಂಗಳವಾರ ಆಯ್ಕೆ ಮಾಡಿದೆ.

ಮಾಜಿ ಸಚಿವ ರವೀಂದ್ರ ಚವಾಣ್‌ ಅವರನ್ನು ಮಹಾರಾಷ್ಟ್ರ ಘಟಕದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರ ಆಯ್ಕೆಗಾಗಿ ವೀಕ್ಷಕರಾಗಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸಭೆಯ ಬಳಿಕ ಈ ಕುರಿತು ಮುಂಬೈನಲ್ಲಿ ಘೋಷಣೆ ಮಾಡಿದರು. 

ಉತ್ತರಾಖಂಡ ಘಟಕದ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಮಹೇಂದ್ರ ಭಟ್ ಪುನರಾಯ್ಕೆಗೊಂಡಿದ್ದಾರೆ. 25 ವರ್ಷಗಳಲ್ಲಿ, ರಾಜ್ಯ ಘಟಕದ ಅಧ್ಯಕ್ಷರಾಗಿ ಸತತವಾಗಿ ಆಯ್ಕೆಗೊಂಡಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಭಟ್‌ ಪಾತ್ರರಾಗಿದ್ದಾರೆ.

ADVERTISEMENT

ಚುನಾವಣಾ ವೀಕ್ಷಕರಾಗಿದ್ದ ಪಕ್ಷದ ಹಿರಿಯ ನಾಯಕ ಹರ್ಷ ಮಲ್ಹೋತ್ರ ಅವರು ಡೆಹ್ರಾಡೂನ್‌ನಲ್ಲಿ ಈ ಕುರಿತು ಘೋಷಣೆ ಮಾಡಿದರು.

ಆಂಧ್ರಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಹಿರಿಯ ನಾಯಕ ಪಿ.ವಿ.ಎನ್‌.ಮಾಧವ ಅವರು ಆಯ್ಕೆಯಾಗಿದ್ದು, ಅಮರಾವತಿಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಚುನಾವಣೆಯ ವೀಕ್ಷಕರಾಗಿದ್ದ ‍ಪಕ್ಷದ ಹಿರಿಯ ನಾಯಕ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರು ಮಾಧವ ಅವರ ಆಯ್ಕೆಯನ್ನು ಘೋಷಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎನ್‌.ರಾಮಚಂದ್ರ ರಾವ್‌ ಅವರು ಪಕ್ಷದ ತೆಲಂಗಾಣ ಘಟಕದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ವಕೀಲರೂ ಆಗಿರುವ ರಾವ್‌, ಎಬಿವಿಪಿಯಲ್ಲೂ ಸಕ್ರಿಯರಾಗಿದ್ದರು.

ಹೈದರಾಬಾದ್‌ನಲ್ಲಿ ನಡೆದ ಸಭೆ ಬಳಿಕ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾವ್‌ ಅವರ ಆಯ್ಕೆಯನ್ನು ಘೋಷಿಸಿದರು.

ಇದರೊಂದಿಗೆ ಬಿಜೆಪಿಯ 37 ರಾಜ್ಯ ಘಟಕಗಳ ಪೈಕಿ 22 ಘಟಕಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಂತಾಗಿದೆ. ಕನಿಷ್ಠ 19 ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆ ಮುಗಿದ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಾರಂಭವಾಗುತ್ತದೆ. ಈಗ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಕ್ಕೆ ದಾರಿ ಸುಗಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.