ADVERTISEMENT

ಚುಕ್ಕಾಣಿ ಹಿಡಿದ ದೇಶದ ಮೊದಲ ಅಂಧ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌

ಉಪವಿಭಾಗಾಧಿಕಾರಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 2:13 IST
Last Updated 15 ಅಕ್ಟೋಬರ್ 2019, 2:13 IST
ದೇಶದ ಮೊದಲ ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌ ಸೋಮವಾರ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು
ದೇಶದ ಮೊದಲ ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌ ಸೋಮವಾರ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು   

ತಿರುವನಂತಪುರ: ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌ ಅವರು ಕೇರಳದ ತಿರುವನಂತಪುರದ ಉಪವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಇವರು ದೇಶದ ಮೊದಲ ಅಂಧ ಐಎಎಸ್‌ ಅಧಿಕಾರಿ ಎನಿಸಿದ್ದಾರೆ.

ತನ್ನ ಅಂಗವೈಕಲ್ಯವನ್ನು ಮೀರಿನಿಂತ ಪ್ರಾಂಜಲ್‌ ಅವರು 2017ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ 124ನೇ ರ್‍ಯಾಂಕ್‌ ಪಡೆದಿದ್ದರು. 2016ರಲ್ಲಿ 773ನೇ ರ್‍ಯಾಂಕ್‌ ಪಡೆದಿದ್ದ ಅವರು 2017ರಲ್ಲಿ ಮತ್ತೆ ಪರೀಕ್ಷೆ ಬರೆದು ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡಿದ್ದರು.

ಹೊಸ ಹುದ್ದೆಯನ್ನು ಸ್ವೀಕರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಜೀವನದಲ್ಲಿ ಯಾವತ್ತೂ ಸೋಲೊಪ್ಪಿಕೊಳ್ಳಬಾರದು. ನಿರಂತರವಾಗಿ ಶ್ರಮ ವಹಿಸಿದರೆ ಉದ್ದೇಶಿತ ಗುರಿಯನ್ನು ತಲುಪಲು ಪ್ರತಿಯೊಬ್ಬರಿಂದಲೂ ಸಾಧ್ಯ’ ಎಂದರು.

ADVERTISEMENT

ಹೊಸ ಜವಾಬ್ದಾರಿಯನ್ನು ವಹಿಸಿ ಕೊಂಡ ಪ್ರಾಂಜಲ್‌ ಅವರನ್ನು ತಿರುವನಂತಪುರ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್‌ ಹಾಗೂ ಹಿರಿಯ ಐಎಎಸ್‌ ಅಧಿಕಾರಿ ಬಿಜು ಪ್ರಭಾಕರ್‌ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದರು.

ಮುಂಬೈಯ ಉಲ್ಲಾಸನಗರದ ಪ್ರಾಂಜಲ್‌ ಅವರು ತಮ್ಮ ಆರನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡಿದ್ದರು.

ಛಲ ಬಿಡದೆ ಅಧ್ಯಯನ ನಡೆಸಿದ ಅವರು ಜೆಎನ್‌ಯುನಿಂದ ‘ಅಂತರರಾಷ್ಟ್ರೀಯ ಸಂಬಂಧಗಳು’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲವು ಅಣಕು ಸಂದರ್ಶನಗಳನ್ನು ಎದುರಿಸಿದ್ದನ್ನು ಬಿಟ್ಟರೆ, ಪ್ರಾಂಜಲ್‌ ಅವರು ಯಾವುದೇ ಐಎಎಸ್‌ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲಿಲ್ಲ. ಅಧ್ಯಯನ ಮತ್ತು ತಮ್ಮ ಕೆಲಸಗಳಿಗಾಗಿ ಅವರು ದೃಷ್ಟಿಹೀನರಿಗಾಗಿಯೇ ಇರುವ ಕೆಲವು ಸಾಫ್ಟ್‌ವೇರ್‌ಗಳ ಸಹಾಯ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.