ADVERTISEMENT

ಭೀಕರ ಪ್ರವಾಹ: ಅಸ್ಸಾಂನಲ್ಲಿ ಮನೆಗಳನ್ನು ತೊರೆದ 5 ಲಕ್ಷ ಮಂದಿ

ಪಿಟಿಐ
Published 18 ಮೇ 2022, 8:07 IST
Last Updated 18 ಮೇ 2022, 8:07 IST
ಅಸ್ಸಾಂ ಪ್ರವಾಹ: ಪಿಟಿಐ ಚಿತ್ರ
ಅಸ್ಸಾಂ ಪ್ರವಾಹ: ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹದಿಂದ ಜೀವ ರಕ್ಷಿಸಿಕೊಳ್ಳಲು 5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ, ಪ್ರವಾಹ ಸಂಬಂಧಿತ ಅವಘಡಗಳಲ್ಲಿ 7 ಮಂದಿ ಸಾವಿಗೀಡಾಗಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಭೀಕರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜಗತ್ತಿನ ಬೃಹತ್ ನದಿಗಳಲ್ಲೊಂದಾದ ಬ್ರಹ್ಮಪುತ್ರ, ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ADVERTISEMENT

ಅಸ್ಸಾಂನ ಬಹುತೇಕ ಪ್ರದೇಶಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಮುಂದಿನ ಎರಡು ದಿನ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಪ್ರವಾಹದಿಂದ ರಾಜ್ಯದಲ್ಲಿ 5 ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. ಗಂಟೆಗಂಟೆಗೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸುತ್ತಿದೆ’ಎಂದು ಅಸ್ಸಾಂ ಜಲ ಸಂಪನ್ಮೂಲ ಸಚಿವ ಪಿಜೂಷ್ ಹಜಾರಿಕ ಹೇಳಿದ್ದಾರೆ.

ಹೊಜಾಯ್ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿದ್ದ 2,000 ಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ಎಂದು ಆರೋಗ್ಯ ಸಚಿವ ಕೇಶವ್ ಮೊಹಾಂತ ತಿಳಿಸಿದ್ದಾರೆ.

‘ಭೀಕರ ಪ್ರವಾಹಕ್ಕೆ ತುತ್ತಾಗಿರುವ ದಿಮ ಹಸಾವ್ ಜಿಲ್ಲೆಯಲ್ಲಿ ಪರಿಸ್ಥಿತಿ ಈಗಲೂ ಕಠಿಣವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ರಸ್ತೆ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ’ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಜೊಗೆನ್ ಮೋಹನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.