ADVERTISEMENT

ಕಳ್ಳಭಟ್ಟಿ ಸೇವಿಸಿ ಮತ್ತೆ ಐವರು ಸಾವು: ಬಿಹಾರದಲ್ಲಿ ಮುಂದುವರಿದ ಸಾವಿನ ಸರಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 7:58 IST
Last Updated 27 ಜನವರಿ 2022, 7:58 IST
   

ಪಾಟ್ನಾ: ಬಿಹಾರ ರಾಜ್ಯದಲ್ಲಿ ನಕಲಿ ಮದ್ಯದಿಂದ ಸಾವಿನ ಘಟನೆಗಳು ನಿರಂತರವಾಗಿ ಕಾಡುತ್ತಿವೆ. ಬುಧವಾರ, ಬಿಹಾರದ ಬಕ್ಸರ್ ಜಿಲ್ಲೆಯ ದುಮ್ರಾವ್‌ನಲ್ಲಿ ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ. ನಾಲ್ವರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ್ದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಮುರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ಸಾರಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಐದು ಮಂದಿ ಸಾವನ್ನಪ್ಪಿದ ಒಂದು ವಾರದೊಳಗೆ ಮತ್ತೆ ದುರಂತ ಸಂಭವಿಸಿದೆ. ಅದಕ್ಕೂ ಒಂದು ವಾರದ ಮೊದಲು, ನಳಂದಾ ಜಿಲ್ಲೆಯ ಅಧಿಕಾರಿಗಳು ನಕಲಿ ಮದ್ಯ ಸೇವನೆಯಿಂದ 11 ಮಂದಿ ಸಾವಿಗೀಡಾಗಿದ್ದನ್ನು ದೃಢಪಡಿಸಿದ್ದರು.

ಐವರ ಸಾವಿನ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಬಕ್ಸರ್ ಎಸ್ಪಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ADVERTISEMENT

2021ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರು ನಕಲಿಮದ್ಯ ಅಥವಾ ಕಳ್ಳ ಭಟ್ಟಿ ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ. ದುರಂತದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನಿಖೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದರು.

ಸರ್ಕಾರ ಕಳ್ಳ ಭಟ್ಟಿ ಸಾವುಗಳನ್ನು ತಡೆಯಲು ವಿಫಲವಾದ ಕಾರಣ, ಪ್ರತಿಪಕ್ಷಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿವೆ. ಅವರ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷವೂ ಸಹ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಸಿಎಂ ನಿತೀಶ್ ಕುಮಾರ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಬಿಹಾರದಲ್ಲಿ ನಕಲಿ ಮದ್ಯದಿಂದಾಗುತ್ತಿರುವ ಸಾವಿಗೆ ಹೊಣೆ ಹೊತ್ತು ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರ್‌ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.