ADVERTISEMENT

ಮಣಿಪುರ ಹಿಂಸಾಚಾರ: ಐದು ಮಂದಿ ಸಾವು

ನಿಂಗ್‌ತೌಖೋಂಗ್‌ ಖಖುನೌ ಮತ್ತು ಕಾಂಗ್‌ಚುಪ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳು

ಪಿಟಿಐ
Published 18 ಜನವರಿ 2024, 20:32 IST
Last Updated 18 ಜನವರಿ 2024, 20:32 IST
   

ಗುವಾಹಟಿ/ಇಂಫಾಲ್‌: ಸಂಘರ್ಷ ಪೀಡಿತ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ತಂದೆ– ಮಗ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಮೈತೇಯಿ ಸಮುದಾಯ ಪ್ರಾಬಲ್ಯ ವಿರುವ ಬಿಷ್ಣುಪುರ ಜಿಲ್ಲೆಯ ನಿಂಗ್‌ತೌಖೋಂಗ್‌ ಖಖುನೌ ಗ್ರಾಮದ ಮೇಲೆ ಸಂಜೆ 4.30ರ ಸುಮಾರಿಗೆ ದಾಳಿ ನಡೆಸಿದ ಶಂಕಿತ ಉಗ್ರರು, ತಂದೆ– ಮಗ ಸೇರಿ ಮೂವರನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತರನ್ನು ಓಯಿನಮ್‌ ಬಮೊಯಿಜಾವೊ (61), ಅವರ ಗಮನ ಓಯಿನಮ್‌ ಮಣಿತೊಂಬಾ ಮತ್ತು ಅವರ ನೆರೆ ಮನೆಯ ಥಿಯಮ್‌ ಸೋಮನ್‌ ಎಂದು ಗ್ರಾಮಸ್ಥರು ಗುರುತಿಸಿದ್ದಾರೆ. ಈ ಮೂವರು ಮೈತೇಯಿ ಸಮುದಾಯಕ್ಕೆ ಸೇರಿದವರು. ಈ ಗ್ರಾಮವು ಕುಕಿ ಸಮುದಾಯದವರು ಪ್ರಾಬಲ್ಯವಿರುವ ಚುರಚಂದಪುರ ಜಿಲ್ಲೆಗೆ ಹೊಂದಿಕೊಂಡಿದೆ. 

ADVERTISEMENT

ಸ್ವಯಂ ಸೇವಕ ಸಾವು: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗ್ರಾಮ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮೈತೇಯಿ ಸಮುದಾಯದ ಟಿ. ಮನೋರಂಜನ್ (26) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸಮೀಪದ ಗುಡ್ಡಗಾಡು ಪ್ರದೇಶ
ಗಳಿಂದ ಬಂದಿದ್ದ ಶಂಕಿತ ಉಗ್ರರು ಬುಧವಾರ ರಾತ್ರಿ ಕಾಂಗ್‌ಚುಪ್‌ ಪ್ರದೇಶದ ಮೇಲೆ ದಾಳಿ ನಡೆಸಿದರು. ಅದಕ್ಕೆ ಎದುರಾಗಿ ಗ್ರಾಮ ಸ್ವಯಂ ಸೇವಕರು ಪ್ರತಿದಾಳಿ ನಡೆಸಿದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 

ಪ್ರತಿಭಟನೆ: ಇದರ ಬೆನ್ನಲ್ಲೇ, ಭಾರಿ ಸಂಖ್ಯೆಯಲ್ಲಿ ಮಹಿಳೆಯರಿದ್ದ ಗುಂಪು ಇಂಫಾಲ್‌ನಲ್ಲಿ ರ್‍ಯಾಲಿ ನಡೆಸಿ ಹಿಂಸಾಚಾರವನ್ನು ಖಂಡಿಸಿದೆ. ಪ್ರತಿಭಟನಕಾರರ ಮೆರವಣಿಗೆಯು ರಾಜಭವನದ ಕಡೆಗೆ ಸಾಗುತ್ತಿದ್ದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ಈ ವೇಳೆ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಆಗ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಮೂವರಿಗೆ ಗುಂಡೇಟು

ಮಣಿಪುರದ ಥೌಬಲ್‌ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಬಂದೂಕುಧಾರಿಗಳು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಬಿಎಸ್‌ಎಫ್‌ನ ಮೂವರು ಸಿಬ್ಬಂದಿಗೆ ಗುಂಡು ತಾಗಿದ್ದು, ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಥೌಬಲ್‌ ಪೊಲೀಸ್‌ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ ಗುಂಪಿನಲ್ಲಿದ್ದ ಬಂದೂಕುಧಾರಿಗಳು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಮೊದಲಿಗೆ ಈ ಗುಂಪು ಥೌಬಲ್‌ ಜಿಲ್ಲೆಯ
ಖಂಗಾಬೊಕ್‌ನಲ್ಲಿರುವ ಭಾರತೀಯ ಮೀಸಲು ಪಡೆಯ ಮೂರನೇ ಬೆಟಾಲಿಯನ್‌ ಅನ್ನು ಗುರಿಯಾಗಿಸಿತ್ತು. ಅಲ್ಲಿ ಭದ್ರತಾ ಪಡೆಗಳು ಈ ಗುಂಪನ್ನು ಹಿಮ್ಮೆಟ್ಟಿಸಿತ್ತು. ಬಳಿಕ ಈ ಗುಂಪು ಪೊಲೀಸ್ ಪ್ರಧಾನ ಕಚೇರಿಯತ್ತ ಸಾಗಿತು. ಇದರಲ್ಲಿದ್ದ ಬಂದೂಕುಧಾರಿಗಳು ಅಲ್ಲಿ ಗುಂಡು ಹಾರಿಸಿದರು ಎಂದು ಅವರು ಹೇಳಿದ್ದಾರೆ.

ಗಾಯಗೊಂಡ ಬಿಎಸ್‌ಎಫ್‌ ಸಿಬ್ಬಂದಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಥೌಬಲ್‌ನಲ್ಲಿ ಜಿಲ್ಲಾಡಳಿತ ಕರ್ಫ್ಯೂ ಜಾರಿಗೊಳಿಸಿದೆ.

ಮೊರೆ ಎಂಬಲ್ಲಿ ಬುಧವಾರ ಶಸ್ತ್ರಸಜ್ಜಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಮಣಿಪುರ ಪೊಲೀಸ್‌ ಕಮಾಂಡೊದ ಇಬ್ಬರು ಮೃತಪಟ್ಟಿದ್ದರು. ಮತ್ತಿಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ತೌಬಲ್‌ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.