ADVERTISEMENT

ವಿಮಾನ ಪತನ: ಮದುವೆ ಬಳಿಕ ಮೊದಲ ಬಾರಿಗೆ ಗಂಡನನ್ನು ಸೇರಲು ತೆರಳುತ್ತಿದ್ದ ನವ ವಧು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2025, 14:05 IST
Last Updated 12 ಜೂನ್ 2025, 14:05 IST
   

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಎಐ–171 ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 224 ಪ್ರಯಾಣಿಕರಲ್ಲಿ ಬಹುತೇಕರು ಬದುಕಿರುವ ಸಾಧ್ಯತೆ ಇಲ್ಲ ಎಂಬ ವರದಿಗಳು ಬರುತ್ತಿವೆ. ಈ ನಡುವೆ ಅಪಘಾತದಲ್ಲಿ ಮೃತಪಟ್ಟವರ ಕುರಿತಂತೆ ಒಂದೊಂದೇ ಕರುಣಾಜನಕ ಕಥೆಗಳು ಹೊರಬರುತ್ತಿವೆ.

ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನಕ್ಕೆ ಎಲ್ಲಿಯೂ ನಿಲುಗಡೆ ಇರಲಿಲ್ಲ. 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಳಿಗಿಂತ ಹೆಚ್ಚು ದಹನಶೀಲ ವಾಯುಯಾನ ಇಂಧನವನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ಪತನಗೊಂಡ ಕೂಡಲೇ ಸ್ಫೋಟ ಸಂಭವಿಸಿ ಕಿತ್ತಳೆ ಬಣ್ಣದ ಬೆಂಕಿ ಉಂಡೆಗಳು ಆವರಿಸಿದ್ದವು.

ಈ ಭೀಕರ ದುರಂತ ಸಂಭವಿಸಿದ ವಿಮಾನದಲ್ಲಿ, ತನ್ನ ಪತಿಯನ್ನು ಸೇರಲು ಲಂಡನ್‌ಗೆ ತೆರಳುತ್ತಿದ್ದ ಇತ್ತೀಚೆಗೆ ವಿವಾಹವಾಗಿದ್ದ ಖುಷ್ಬೂ ರಾಜ್‌ಪುರೋಹಿತ್ ಕೂಡ ಇದ್ದರು.

ADVERTISEMENT

ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ಈ ವರ್ಷದ ಜನವರಿಯಲ್ಲಿ ಮನ್ಫೂಲ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮದುವೆಯ ನಂತರ ಮೊದಲ ಬಾರಿಗೆ ಪತಿಯನ್ನು ಭೇಟಿಯಾಗಲು ತೆರಳುತ್ತಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅರಬಾ ಗ್ರಾಮದ ಮದನ್ ಸಿಂಗ್ ರಾಜ್‌ಪುರೋಹಿತ್ ಎಂಬುವವರ ಪುತ್ರು ಖುಷ್ಬೂ. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ಥಾನದ 11 ಮಂದಿ ಪೈಕಿ ಷೆಫ್ ಆಗಿ ಕೆಲಸ ಮಾಡಲು ತೆರಳುತ್ತಿದ್ದ ಇಬ್ಬರು ಮತ್ತು ಮಾರ್ಬಲ್ ವ್ಯಾಪರಿಯ ಮಗ ಮತ್ತು ಮಗಳು ಸೇರಿದ್ದಾರೆ.

ವಿಮಾನವು ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಮಧ್ಯಾಹ್ನ 1.38ರಲ್ಲಿ ಪತನಗೊಂಡಿತು. ಅಪಾಯದ ಸೂಚನೆ ಅರಿತ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಕರೆ ಮಾಡಿದ್ದ ಎಮದು ತಿಳಿದುಬಂದಿದೆ.

ವಿಮಾನವು 242 ಜನರನ್ನು ಹೊತ್ತೊಯ್ಯುತ್ತಿತ್ತು. ಸಿಬ್ಬಂದಿ ಸೇರಿದಂತೆ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.