ADVERTISEMENT

ಇಂದಿನಿಂದ ದೇಶೀಯ ವಿಮಾನಯಾನ

ಪಿಟಿಐ
Published 24 ಮೇ 2020, 19:24 IST
Last Updated 24 ಮೇ 2020, 19:24 IST
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವುದಿನಗಳಿಂದ ನಿಂತಿರುವ ವಿಮಾನಗಳು, ಸೋಮವಾರದಿಂದ ಹಾರಾಟ ಆರಂಭಿಸಲಿವೆ –ಪಿಟಿಐ ಚಿತ್ರ
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವುದಿನಗಳಿಂದ ನಿಂತಿರುವ ವಿಮಾನಗಳು, ಸೋಮವಾರದಿಂದ ಹಾರಾಟ ಆರಂಭಿಸಲಿವೆ –ಪಿಟಿಐ ಚಿತ್ರ   

ನವದೆಹಲಿ: ದೇಶೀಯ ವಿಮಾನಯಾನ ಸೇವೆ ಸೋಮವಾರದಿಂದ ಭಾಗಶಃ ಆರಂಭವಾಗಲಿದೆ. ಇದಕ್ಕೆ ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವು ‘ನಾವಿನ್ನೂ ಸಿದ್ಧವಾಗಿಲ್ಲ’ ಎಂದಿವೆ. ಕೆಲವು ರಾಜ್ಯಗಳಲ್ಲಿ ಪ್ರಯಾಣಿಕರಿಗಾಗಿ ಇನ್ನೂ ನಿಯಮಾವಳಿ ರೂಪಿಸಿಲ್ಲ. ಈ ಗೊಂದಲಗಳ ಮಧ್ಯೆಯೂ ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್‌ ಬುಕಿಂಗ್‌ ಆರಂಭಿಸಿವೆ.

ಈ ಹಂತದಲ್ಲಿ ವಿಮಾನ ಯಾನ ಆರಂಭಿಸುವುದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿವೆ. ಚಂಡಮಾರುತದಿಂದಾಗಿ ಹಾನಿಗೊಳಗಾಗಿರುವ ಕೋಲ್ಕತ್ತ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಸೇವೆ ಆರಂಭಿಸುವುದು ಬೇಡ ಎಂದು ಪಶ್ಚಿಮ ಬಂಗಾಳ ಹೇಳಿದೆ.

25 ವಿಮಾನಗಳಿಗೆ ಅವಕಾಶ:ಮಹಾರಾಷ್ಟ್ರ ಸರ್ಕಾರವೂ ವಿಮಾನಯಾನ ಆರಂಭಿಸಲು ವಿರೋಧ ವ್ಯಕ್ತಪಡಿಸಿದೆ. ಆದರೆ ತುರ್ತು ಅಗತ್ಯಗಳಿಗಾಗಿ ಮುಂಬೈಯಿಂದ 25 ವಿಮಾನಗಳ ಹಾರಾಟಕ್ಕೆ ಸೋಮವಾರದಿಂದ ಅನುಮತಿ ನೀಡುವುದಾಗಿ ಹೇಳಿದೆ.

ADVERTISEMENT

‘ಸಿದ್ಧತೆಗೆ ನಮಗೆ ಇನ್ನಷ್ಟು ಕಾಲಾವಕಾಶ ಬೇಕು. ಅಲ್ಲಿಯವರೆಗೆ ಕೆಲವೇ ಕೆಲವು ವಿಮಾನಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಕೇಂದ್ರದ ವಿಮಾನಯಾನ ಸಚಿವರಿಗೆ ತಿಳಿಸಿದ್ದೇನೆ. ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಮತ್ತುಇತರರನ್ನು ಕರೆತರಲು ಹಾಗೂ ವೈದ್ಯಕೀಯ ತುರ್ತು ಸಂದರ್ಭದ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಟ್ವೀಟ್‌ ಮಾಡಿದ್ದಾರೆ.

‘25 ವಿಮಾನಗಳು ಇಳಿಯಲು ಮತ್ತು 25 ವಿಮಾನಗಳ ಹಾರಾಟಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವಕಾಶ ನೀಡಲಾಗುವುದು. ಹಂತಹಂತವಾಗಿ ಈ ಪ್ರಮಾಣವನ್ನು ಹೆಚ್ಚಿಸಲಾಗುವುದು’ ಎಂದು ಸಚಿವ ನವಾಬ್‌ ಮಲಿಕ್‌ ತಿಳಿಸಿದರು.

‘ನಾವಿನ್ನೂ ಲಾಕ್‌ಡೌನ್‌ನ ನಿಯಮಗಳನ್ನು ಸಡಿಲಿಸಿಲ್ಲ. ಕೆಂಪು ವಲಯದಲ್ಲಿರುವ ವಿಮಾನ ನಿಲ್ದಾಣವನ್ನು ಸಾರ್ವಜನಿಕರಿಗೆ ತೆರೆಯುವುದು ಸರಿಯಾದ ಕ್ರಮ ಆಗಲಾರದು’ ಎಂದು ಮಹಾರಾಷ್ಟ್ರದ ಗೃಹಸಚಿವ ಅನಿಲ್‌ ದೇಶ್‌ಮುಖ್‌ ಹೇಳಿದ್ದಾರೆ.

ರಾಜ್ಯಗಳ ವಿರೋಧದ ಹೊರತಾಗಿಯೂ ವಿಮಾನ ಸೇವೆಯನ್ನು ಆರಂಭಿಸಿದರೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಬೇರೆ ರಾಜ್ಯಗಳಿಂದ ಬಂದಿಳಿಯುವ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ತಮ್ಮ ಮನೆಗೆ ಅಥವಾ ಉದ್ದೇಶಿತ ಸ್ಥಳಕ್ಕೆ ತೆರಳಲು ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.

‘ಇಂಥ ಸಂದರ್ಭಗಳನ್ನು ಎದುರಿಸುವಾಗ ಹಿಂಜರಿಕೆಯಾಗುವುದು ಸಹಜ. ರಾಜ್ಯ ಸರ್ಕಾರಗಳ ಆತಂಕಗಳನ್ನು ನಿವಾರಿಸುವ ಪ‍್ರಯತ್ನವನ್ನು ನಾವು (ಕೇಂದ್ರ ಸರ್ಕಾರ) ಮಾಡುತ್ತೇವೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ಸಿಂಗ್‌ ಪುರಿ ಹೇಳಿದ್ದಾರೆ.

ಬುಕಿಂಗ್‌ ಆರಂಭ:ಸೋಮವಾರದಿಂದ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರಿಂದ ಇಂಡಿಗೋ, ಸ್ಪೈಸ್‌ ಜೆಟ್‌, ಏರ್‌ ಏಷ್ಯಾ ಇಂಡಿಯಾ ಹಾಗೂ ವಿಸ್ತಾರಾ ಸಂಸ್ಥೆಗಳು ಟಿಕೆಟ್‌ ಕಾಯ್ದಿರಿಸುವಿಕೆಯನ್ನು ಆರಂಭಿಸಿವೆ.

ಯಾವ್ಯಾವ ರಾಜ್ಯಗಳು ಅನುಮತಿ ನೀಡಲಿವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ಇನ್ನೂ ಕೆಲವು ದಿನ ಕಾಯ್ದುನೋಡಲು ಗೊ ಏರ್‌ ಸಂಸ್ಥೆಯವರು ನಿರ್ಧರಿಸಿದ್ದಾರೆ.

ಮಾರ್ಗಸೂಚಿ ಬಿಡುಗಡೆ

ವಿಮಾನ, ರೈಲು ಅಥವಾ ಬಸ್‌ ಮೂಲಕ ಪ್ರಯಾಣ ಮಾಡುವವರು ಮತ್ತು ಸೇವಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ‘ಆರೋಗ್ಯ ಸೇತು’ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ಸಲಹೆ ನೀಡುವುದರ ಜತೆಗೆ, ಪ್ರಯಾಣಿಕರಿಗೆ ಪ್ರತ್ಯೇಕವಾಸ ಏರ್ಪಡಿಸುವ ವಿಚಾರವಾಗಿ ರಾಜ್ಯ ಸರ್ಕಾರಗಳು ತಮ್ಮದೇ ಆದ ನಿಯಮಾವಳಿಗಳನ್ನು ರೂಪಿಸಬಹುದು ಎಂದೂ ಹೇಳಿದೆ.

* ದೇಶೀಯ ಪ್ರಯಾಣ ಮಾಡಿದವರು ಕನಿಷ್ಠ 14 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ತಾವೇ ನಿಗಾ ಇಟ್ಟಿರಬೇಕು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಜಿಲ್ಲಾಡಳಿತಕ್ಕೆ ಅಥವಾ ದೂರವಾಣಿ 1075 ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು

* ವಿದೇಶಗಳಿಂದ ಬರುವವರು ಸ್ವಂತ ಖರ್ಚಿನಲ್ಲಿ 7 ದಿನಗಳ ಕಾಲ ಪ್ರತ್ಯೇಕ ವಾಸಕ್ಕೆ ಒಳಗಾಗಬೇಕು. ಆನಂತರ 7 ದಿನ ಮನೆಯಲ್ಲೇ ಪ್ರತ್ಯೇಕವಾಸ ನಡೆಸಬೇಕು

* ವಿಮಾನ, ರೈಲ್ವೆ ಅಥವಾ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕು. ಸೋಂಕು ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ

* ಪ್ರಯಾಣದ ವೇಳೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ವೈಯಕ್ತಿಕ ಮತ್ತು ಪರಿಸರದ ಶುಚಿತ್ವ ಕಾಪಾಡಿಕೊಳ್ಳಬೇಕು

* ಪ್ರಯಾಣಿಕರಿಗೆ ಟಿಕೆಟ್‌ ಜತೆಗೆ, ಏನು ಮಾಡಬೇಕು– ಏನು ಮಾಡಬಾರದು ಎಂಬ ಮಾಹಿತಿಯುಕ್ತ ಕರಪತ್ರವನ್ನು ಸಂಬಂಧಪಟ್ಟ ಏಜನ್ಸಿಯವರು ನೀಡಬೇಕು

* ಕೋವಿಡ್‌–19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ರೈಲು, ಬಸ್‌ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಬೇಕು

* ನಿಲ್ದಾಣಗಳಲ್ಲಿ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.