ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ
(ಸಂಗ್ರಹ ಚಿತ್ರ)
ವಿಲ್ಲುಪುರಂ: ಫೆಂಜಲ್ ಚಂಡಮಾರುತದ ಪರಿಣಾಮ ಉಂಟಾದ ಮಳೆಯಿಂದಾಗಿ ಉತ್ತರ ತಮಿಳುನಾಡಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಲ್ಲುಪುರಂ ಮತ್ತು ಕಡಲೂರಿನ ಹಲವು ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನಗಳು ಎರಡು ಅಡಿವರೆಗೆ ಮುಳುಗಿದ್ದವು. ಹಲವೆಡೆ ಮನೆಗಳು ಮುಳುಗಿದ್ದು, ಮರಗಳು ಬುಡಮೇಲಾಗಿ ಉರುಳಿ ಬಿದ್ದಿವೆ.
ವಿಲ್ಲುಪುರಂನ ವಿಕ್ರವಂಡಿ/ ಮತ್ತು ಮುಂಡಿಯಂಪಕ್ಕಂ ನಡುವಿನ ಪ್ರಧಾನ ಸೇತುವೆಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿದ ಕಾರಣ ದಕ್ಷಿಣ ರೈಲ್ವೆಯು ಸೋಮವಾರ ಬೆಳಿಗ್ಗೆ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದ ಹಲವು ರೈಲುಗಳ ಸಂಚಾರ ರದ್ದು ಮಾಡಲಾಯಿತು. ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಯಿತು. ಹೀಗಾಗಿ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಯಿತು. ವಿಲ್ಲುಪುರಂ ಸುತ್ತಮುತ್ತ ಮತ್ತು ಚೆನ್ನೈ–ತಿರುಚಿರಾಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿತ್ತು.
ವಿಲ್ಲುಪುರಂ ಮೂಲಕ ಸಾಗುವ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಕಾರಣ ನೂರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ರೈಲು ಸಂಚಾರ ಪುನಃ ಆರಂಭಿಸಿದ ನಂತರ ಪರಿಸ್ಥಿತಿ ಸುಧಾರಿಸಿತು.
ಭಾರಿ ಮಳೆಯ ಪರಿಣಾಮ ತಿರುವಣ್ಣಾಮಲೈ ಸಮೀಪದ ಸೇತುವೆಯೊಂದು ಭಾಗಶಃ ಮುರಿದುಬಿದ್ದಿದೆ. ಕರುಣಾಪುರಂ ಸಮೀಪದ ಸೇತುವೆ ಮುಳುಗಿ ಸಮೀಪದ ಪ್ರದೇಶಗಳಿಗೆ ನೀರು ನುಗ್ಗಿದೆ.
ಗಿಂಗಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದ್ದು, ಎಚ್ಚೆತ್ತ ಅಧಿಕಾರಿಗಳು ಕೂಡಲೇ ರೋಗಿಗಳನ್ನು ಸ್ಥಳಾಂತರಿಸಿದರು.
ಸ್ಟಾಲಿನ್ ಭೇಟಿ:
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಿಲ್ಲುಪುರಂಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಕೃಷ್ಣಗಿರಿಗೆ ಭೇಟಿ ನೀಡಿ, ತೊಂದರೆಗೊಳಗಾದ ರೈತರು ಮತ್ತು ಜನರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಚೆನ್ನೈ: ಫೆಂಜಲ್ ಚಂಡಮಾರುತವು ತಮಿಳುನಾಡಿನ ಚೆನ್ನೈನಿಂದ ಚೆಂಗಲ್‌ಪಟ್ಟುವರೆಗೆ ಮತ್ತು ದೂರದ ಕೃಷ್ಣಗಿರಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಸಿದೆ. ಕೃಷ್ಣಗಿರಿಯಲ್ಲಿ 24 ತಾಸುಗಳಲ್ಲಿ 50 ಸೆಂಟಿಮೀಟರ್
ನಷ್ಟು ಮಳೆಯಾಗಿದೆ. 300 ವರ್ಷಗಳಿಗೊಮ್ಮೆ ಇಂಥ ಮಳೆಯಾಗುತ್ತದೆ.
ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಾದ ತಿರುವಳ್ಳೂರ್, ಕಾಂಚೀಪುರಂ ಮತ್ತು ಚೆಂಗಲ್‌ಪಟ್ಟುನಲ್ಲಿ ಚಂಡಮಾರುತವು ಮೊದಲು ಪ್ರಭಾವ ಬೀರಿತ್ತು. ನಂತರ ತಮಿಳುನಾಡಿನ ವಿಲ್ಲುಪುರಂ, ಕಡಲೂರು ಮತ್ತು ಪುದುಚೇರಿಯತ್ತ ಸಾಗಿ ಅಧಿಕ ಮಳೆ ಸುರಿಸಿದೆ. ಬಳಿಕ ತಿರುವಣ್ಣಮಲೈ, ರಾಣಿಪೇಟ್, ವೆಲ್ಲೂರು, ಧರ್ಮಪುರಿ, ಕೃಷ್ಣಗಿರಿ, ಸೇಲಂನಲ್ಲೂ ಮಳೆ ಸುರಿಸಿದೆ.
ಕೃಷ್ಣಗಿರಿಯ ಒಳನಾಡು ಪ್ರದೇಶ ಉತ್ತಂಗರೈನಲ್ಲಿ 50 ಸೆಂ. ಮೀ. ಮಳೆಯಾಗಿದೆ. ಇದೊಂದು ‘ಅಪರೂಪದ ಸಂಗತಿ’. ಕೃಷ್ಣಗಿರಿ, ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
‘ನಿಧಾನಗತಿಯಲ್ಲಿ ಸಾಗುವ ಚಂಡಮಾರುತಗಳು ಅತ್ಯಂತ ಅಪಾಯಕಾರಿ. ಉತ್ತಂಗರೈನಲ್ಲಿ ಎಂದೂ ಇಷ್ಟೊಂದು ಮಳೆಯಾಗಿರಲಿಲ್ಲ. ನಿಧಾನಗತಿಯ ಫೆಂಜಲ್ ಚಂಡಮಾರುತವು ಇಲ್ಲಿ ಇಷ್ಟೊಂದು ಮಳೆಗೆ ಕಾರಣವಾಗಿದೆ’ ಎಂದು ಹವಾಮಾನ ತಜ್ಞ ಪ್ರದೀಪ್ ಜಾನ್ ಹೇಳಿದ್ದಾರೆ.
ವಾತಾವರಣದ ಕೆಳ ಮತ್ತು ಮಧ್ಯಮ ಮಟ್ಟದಲ್ಲಿ ಮಾರುತಗಳು ಒಗ್ಗೂಡಿರುವುದರಿಂದ ಮತ್ತು ಫೆಂಜಲ್ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಿದೆ ಎಂದು ಮತ್ತೊಬ್ಬ ತಜ್ಞ ಅಜಿತ್ ಕುಮಾರ್ ಹೇಳಿದ್ದಾರೆ.
ಫೆಂಜಲ್ ಚಂಡಮಾರುತವು ಪುದುಚೇರಿ–ವಿಲ್ಲುಪುರಂ–ತಿರುವಣ್ಣಾಮಲೈ ಪ್ರದೇಶದಲ್ಲಿ ಸುಮಾರು 30 ಗಂಟೆಗಳ ಕಾಲ ಇತ್ತು. ಹೀಗಾಗಿ ಇಲ್ಲಿ ಭಾರಿ ಮಳೆಯಾಗಿದೆ. ಚಂಡಮಾರುತ ದುರ್ಬಲವಾಗಿದ್ದರೂ, ಈ ಪ್ರದೇಶದಲ್ಲಿ ಮಾರುತಗಳ ಒಗ್ಗೂಡುವಿಕೆಯು ಹೆಚ್ಚು ಕಾಲ ಮೋಡ ಕವಿದ ವಾತಾವರಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಇಲ್ಲಿ ಅಧಿಕ ಮಳೆಯಾಗಿದೆ ಎಂದಿದ್ದಾರೆ.
ತಿರುವಣ್ಣಾಮಲೈ: ಭಾರಿ ಮಳೆಯಿಂದಾಗಿ ಕುಸಿದು ಬಿದ್ದ ಮನೆಯ ಅವಶೇಷಗಳಡಿ ಸಿಲುಕಿದ್ದ ಐದು ಶವಗಳನ್ನು ಸೋಮವಾರ ಹೊರತೆಗೆಯಲಾಯಿತು.
ಎನ್‌ಡಿಆರ್‌ಎಫ್ ತಂಡ ಮತ್ತು ಪೊಲೀಸ್ ಸಿಬ್ಬಂದಿಯ ಸತತ ಕಾರ್ಯಾಚರಣೆ ಬಳಿಕ ಮಗು ಸೇರಿದಂತೆ ಐವರ ಶವಗಳನ್ನು ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದರು. ಇನ್ನು ಇಬ್ಬರಿಗಾಗಿ ಶೋಧ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.