ಅಸ್ಸಾಂ ಗುವಾಹಟಿಯಲ್ಲಿ ಮನೆಯೊಂದರ ಮೇಲೆ ಬಿದ್ದಿರುವ ಬಂಡೆಯನ್ನು ರಕ್ಷಣಾ ಸಿಬ್ಬಂದಿ ತೆರವುಗೊಳಿಸಿದರು
ಪಿಟಿಐ
ಇಟಾನಗರ/ಗ್ಯಾಂಗ್ಟಕ್: ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಆದರೆ ಕುಡಿಯುವ ನೀರಿನ ಅಭಾವ ಉಂಟಾಗಿದೆ.
51 ನೀರು ಸರಬರಾಜು ಕೇಂದ್ರಗಳಿಗೆ ಭೂಕುಸಿತದಿಂದಾಗಿ ಹಾನಿಯಾಗಿದ್ದು, ಪುನರ್‌ನಿರ್ಮಾಣ ಕಾರ್ಯಕ್ಕೆ ಹಲವು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 ಜಿಲ್ಲೆಗಳಲ್ಲಿನ 215 ಗ್ರಾಮಗಳ 33,200 ಜನ ಇನ್ನೂ ಸಂಕಷ್ಟದಲ್ಲಿದ್ದಾರೆ. 515 ಮನೆ, 112 ರಸ್ತೆ, 17 ಸೇತುವೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರ ತಿಳಿಸಿದೆ.
ಮುಂಗಾರು ಆರಂಭವಾದ ಬಳಿಕ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ
76 ಯೋಧರ ಸ್ಥಳಾಂತರ: ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಸಿಕ್ಕಿಂ ಛಟೆನ್ ಪ್ರದೇಶದಲ್ಲಿದ್ದ 76 ಯೋಧರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶನಿವಾರ ಸ್ಥಳಾಂತರಿಸಲಾಗಿದೆ.
ಒಟ್ಟು ಮೂರು ಹೆಲಿಕಾಪ್ಟರ್‌ಗಳ ಮೂಲಕ ಯೋಧರನ್ನು ಪ್ರಕ್ಯೋಂಗ್ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇದಕ್ಕೂ ಮೊದಲು ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಈ ಮೂಲಕ ವೈಮಾನಿಕ ಕಾರ್ಯಾಚರಣೆಯು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಸಿಕ್ಕಿಂನ ಉತ್ತರಭಾಗದ ಹಲವೆಡೆ ಭೂಕುಸಿತ ಸಂಭವಿಸಿತ್ತು. ಲಾಚೆನ್, ಲಾಚುಂಗ್, ಚುಂಗ್‌ತಾಂಗ್ ನಗರಗಳಲ್ಲಿ 1600ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದರು. ಛಟೆನ್‌ನಲ್ಲಿ ಮೂವರು ಯೋಧರು ಮೃತಪಟ್ಟಿದ್ದು, 6 ಯೋಧರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.
ಅಸ್ಸಾಂ: 4 ಲಕ್ಷ ಜನ ಸಂಕಷ್ಟದಲ್ಲಿ
ಗುವಾಹಟಿ: ಅಸ್ಸಾಂನಲ್ಲಿ ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಆದರೆ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಇನ್ನೂ ಸಂಕಷ್ಟದಲ್ಲಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಧುಬ್ರಿ ಕೊಪಿಲಿ ಸೇರಿದಂತೆ ಕೆಲವೆಡೆ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುವಾಹಟಿಯ ರುಪಾನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. 18 ಜಿಲ್ಲೆಗಳಲ್ಲಿನ 1296 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು 16558 ಹೆಕ್ಟೇರ್ ಕೃಷಿಭೂಮಿ ಜಲಾವೃತವಾಗಿದೆ. 296765 ಪ್ರಾಣಿಗಳು ಸಂಕಷ್ಟದಲ್ಲಿದ್ದಾವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.