ADVERTISEMENT

ಮಹಾಕುಂಭ ಮೇಳ: ಆಹಾರ ಸುರಕ್ಷತೆಗೆ ಸಂಚಾರಿ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ನಿಯೋಜನೆ

ಪಿಟಿಐ
Published 15 ಜನವರಿ 2025, 12:51 IST
Last Updated 15 ಜನವರಿ 2025, 12:51 IST
<div class="paragraphs"><p>ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಆಯೋಜನೆಗೊಂಡಿರುವ ಮಹಾಕುಂಬ ಮೇಳದ ಪುಣ್ಯಸ್ನಾನದಲ್ಲಿ ಪಾಲ್ಗೊಂಡ ಭಕ್ತರು</p></div>

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಆಯೋಜನೆಗೊಂಡಿರುವ ಮಹಾಕುಂಬ ಮೇಳದ ಪುಣ್ಯಸ್ನಾನದಲ್ಲಿ ಪಾಲ್ಗೊಂಡ ಭಕ್ತರು

   

ಪಿಟಿಐ ಚಿತ್ರ

ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ ಅಲ್ಲಲ್ಲಿ ಮಾರಾಟವಾಗುತ್ತಿರುವ ಆಹಾರದ ಗುಣಮಟ್ಟದ ಮೇಲೆ ನಿಗಾ ಇಡುವ ದೃಷ್ಟಿಯಿಂದ ಸಂಚಾರಿ ಪರೀಕ್ಷಾ ಪ್ರಯೋಗಾಲಯ ವಾಹನಗಳನ್ನು ನಿಯೋಜಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಬುಧವಾರ ಹೇಳಿದೆ.

ADVERTISEMENT

ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಹಾಳಾಗಿರುವ ಅಥವಾ ಕಲಬೆರಕೆ ಆಹಾರ ಪೂರೈಕೆಯಾಗುವುದನ್ನು ತಡೆಗಟ್ಟುವ ದೃಷ್ಟಿಯಿಂದ ‘ಗಾಲಿಯ ಮೇಲೆ ಆಹಾರ ಸುರಕ್ಷತೆ’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಆಹಾರ ಇಲಾಖೆಯ ಸಹಾಯಕ ಆಯುಕ್ತ ಸುಶಿಲ್ ಕುಮಾರ್ ಸಿಂಗ್‌ ಹೇಳಿದ್ದಾರೆ.

‘ಮಹಾಕುಂಭ ಮೇಳದಲ್ಲಿ ಪೂರೈಕೆಯಾಗುತ್ತಿರುವ ಆಹಾರ ಮತ್ತು ಪಾನೀಯಗಳನ್ನು ಈ ಸಂಚಾರಿ ಪ್ರಯೋಗಾಲಯದಲ್ಲಿ ಆಗಾಗ್ಗ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೋಟೆಲುಗಳು, ಢಾಬಾ, ಸಣ್ಣ ಕ್ಯಾಂಟೀನ್‌ಗಳಿಗೆ ತೆರಳಿ ಅಲ್ಲಿ ಪೂರೈಕೆಯಾಗುತ್ತಿರುವ ಆಹಾರದ ಸುರಕ್ಷತೆಯ ಪರೀಕ್ಷೆ ನಡೆಸಲಾಗುವುದು. ಆಹಾರ ಕುರಿತು ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿ, ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

‘ಮೇಳವನ್ನು ಐದು ವಲಯ ಹಾಗೂ 25 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದಕ್ಕೂ ಒಬ್ಬ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಶುಚಿತ್ವ ಮತ್ತು ಆಹಾರದ ಗುಣಮಟ್ಟವನ್ನು ಇವರು ಪರಿಶೀಲಿಸಲಿದ್ದಾರೆ. ಮೇಳದ ಉದ್ದಗಲದಲ್ಲೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವರು ಆಹಾರ ಪೂರೈಕೆ ಮೇಲೆ ನಿಗಾ ಇಡಲಿದ್ದಾರೆ’ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾಕುಂಭ ಮೇಳದ ಮೊದಲ ದಿನವಾದ ಜ. 13ರಂದು ಸುಮಾರು 1.75 ಕೋಟಿ ಭಕ್ತರು ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. 2ನೇ ದಿನ ಪಾಲ್ಗೊಂಡ ಭಕ್ತರ ಸಂಖ್ಯೆ 3.5 ಕೋಟಿಗೆ ಏರಿಕೆಯಾಗಿತ್ತು. ಕುಂಭಮೇಳದ ಕೊನೆಯ ದಿನವಾದ ಫೆ. 26ರವರೆಗೆ ಸುಮಾರು 40ರಿಂದ 45 ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸರ್ಕಾರ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.