ADVERTISEMENT

ಜಮ್ಮು: ಸತತ ಎರಡನೇ ವರ್ಷ ಹುತಾತ್ಮರ ದಿನ ಆಚರಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 9:13 IST
Last Updated 13 ಜುಲೈ 2021, 9:13 IST
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ಎರಡನೇ ವರ್ಷವೂ ಹುತಾತ್ಮರ ದಿನಾಚರಣೆಯ ಸ್ಮರಣಾರ್ಥ ಅಧಿಕೃತ ರಜೆ ನೀಡಿಲ್ಲ. ಹಾಗೆಯೇ ಕಾರ್ಯಕ್ರಮವನ್ನು ಆಯೋಜಿಸಿಲ್ಲ.

1931ರ ಜುಲೈ 13 ರಂದು ತಮ್ಮ ಹಕ್ಕುಗಳಿಗಾಗಿ ಹೋರಾಡಿದ 22 ಕಾಶ್ಮೀರಿಗಳನ್ನು ಡೋಗ್ರಾ ಆಡಳಿತಗಾರರು ಗುಂಡು ಹಾರಿಸಿ, ಹತ್ಯೆ ಮಾಡಿದ್ದರು. ಈ ಘಟನೆ ಸ್ಮರಣಾರ್ಥವಾಗಿ ಜುಲೈ13 ಅನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.

1947ರಿಂದ 2019ರ ತನಕ ಹುತಾತ್ಮರ ದಿನದ ಸ್ಮರಣಾರ್ಥವಾಗಿ ಅಧಿಕೃತ ರಜೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಸ್ಥಳೀಯ ನಾಯಕರು ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸುತ್ತಿದ್ದರು. ಆದರೆ 2019, ಆಗಸ್ಟ್‌ 5ರಂದು 370ನೇ ವಿಧಿ ರದ್ಧತಿ ಬಳಿಕ ಜುಲೈ 13ರ ಅಧಿಕೃತ ರಜೆಯನ್ನು ತೆಗೆದು ಹಾಕಲಾಯಿತು.

ADVERTISEMENT

ಹಾಗಾಗಿ 2019ರ ಬಳಿಕದಿಂದ ಜಮ್ಮು–ಕಾಶ್ಮೀರದಲ್ಲಿ ಹುತಾತ್ಮರ ದಿನದಂದು ಅಧಿಕೃತ ರಜೆಯಾಗಲಿ, ಕಾರ್ಯಕ್ರಮವನ್ನಾಗಲಿ ಆಯೋಜಿಸಲಾಗುತ್ತಿಲ್ಲ. ಅಷ್ಟೇ ಅಲ್ಲದೆ ಈ ವರ್ಷವೂ ಹುತಾತ್ಮರ ದಿನದಂದು ಪ್ರತ್ಯೇಕವಾದಿಗಳು ಯಾವುದೇ ಮುಷ್ಕರಕ್ಕೆ ಕರೆ ನೀಡಿಲ್ಲ.

‘ಹುತಾತ್ಮರ ಸ್ಮಾರಕದ ಬಳಿ ತೆರಳಿ, ಪುಪ್ಪನಮನ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಜಮ್ಮು–ಕಾಶ್ಮೀರದ ಆಡಳಿತಕ್ಕೆ ಮನವಿ ಮಾಡಿದ್ದೆವು. ಆದರೆ ಅವರು ಅನುಮತಿ ನಿರಾಕರಿಸಿದ್ದಾರೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ವಕ್ತಾರ ಇಮ್ರಾನ್‌ ನಬಿ ತಿಳಿಸಿದ್ದಾರೆ.

ಹುತಾತ್ಮರನ್ನು ಸ್ಮರಿಸಿರುವ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು, ‘ಜಮ್ಮು–ಕಾಶ್ಮೀರದ ಇತಿಹಾಸದಲ್ಲಿ ಜುಲೈ 13 ಮರೆಯಲಾಗದ ದಿನ’ ಎಂದು ಹೇಳಿದ್ಧಾರೆ.

‘ಸರ್ಕಾರವು ಜುಲೈ 13 ಅನ್ನು ರಜಾದಿನದ ಪಟ್ಟಿಯಿಂದ ತೆಗೆದಿದೆ. ಹಾಗಾಗಿ ಜನರು ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡದಂತೆ ತಡೆಯಲು ಶ್ರೀನಗರ ಮತ್ತು ಹಳೆ ನಗರದ ಭಾಗಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.