ADVERTISEMENT

ಭಾರತೀಯ ಚಹಾ ವಿರುದ್ಧ ಷಡ್ಯಂತ್ರ: ಪ್ರಧಾನಿ ಮೋದಿ ಆರೋಪ

ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:32 IST
Last Updated 7 ಫೆಬ್ರುವರಿ 2021, 15:32 IST
ಅಸ್ಸಾಂನ ಢೆಕಿಯಾಜುಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು –ಪಿಟಿಐ ಚಿತ್ರ
ಅಸ್ಸಾಂನ ಢೆಕಿಯಾಜುಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು –ಪಿಟಿಐ ಚಿತ್ರ   

ಗೌಹಾಟಿ: ‘ಜಾಗತಿಕ ಮಟ್ಟದಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿರುವ, ಭಾರತೀಯ ಚಹಾದ ಹೆಸರನ್ನು ಕೆಡಿಸಲು ವಿದೇಶದಲ್ಲಿ ಕುಳಿತಿರುವ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬುದು ದಾಖಲೆಗಳಿಂದ ಬಹಿರಂಗಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಭಾನುವಾರ ಮಾತನಾಡಿದ ಅವರು, ‘ಈ ಷಡ್ಯಂತ್ರವನ್ನು ನೀವು ಬೆಂಬಲಿಸುವಿರಾ, ಸಂಚುಕೋರರ ವಿರುದ್ಧ ಸುಮ್ಮನಿರುತ್ತೀರಾ. ಇಂಥ ಷಡ್ಯಂತ್ರವನ್ನು ದೇಷವು ಎಂದೂ ಸಹಿಸುವುದಿಲ್ಲ. ಇವೆಲ್ಲವನ್ನೂ ನೋಡಿ ಸುಮ್ಮನಿರುವ ರಾಜಕೀಯ ಪಕ್ಷಗಳು, ದೇಶದ ಜನರಿಗೆ ಉತ್ತರ ಕೊಡಬೇಕಾಗುತ್ತದೆ’ ಎಂದರು. ಇದೇ ಕಾರ್ಯಕ್ರಮದಲ್ಲಿ ಮೋದಿ ಅವರು ರಾಜ್ಯದ ಹೆದ್ದಾರಿ ಹಾಗೂ ಇತರ ರಸ್ತೆಗಳನ್ನು ಅಭಿವೃದ್ಧಿಪಡಿಸುವ ‘ಅಸೋಂ ಮಾಲಾ’ ಯೋಜನೆಗೂ ಚಾಲನೆ ನೀಡಿದರು.

ಅಸ್ಸಾಂನ ಪ್ರಮುಖ ಚಹಾ ಉತ್ಪಾತನಾ ಕೇಂದ್ರಗಳಲ್ಲಿ ಒಂದಾಗಿರುವ ಸೋನಿಪತ್‌ ಜಿಲ್ಲೆಯ ಢೆಕಿಯಾಜುಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಚಹಾ ತೋಟದಲ್ಲಿ ದುಡಿಯುವವರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬರುವ ಏಪ್ರಿಲ್‌ ತಿಂಗಳೊಳಗೆ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ ಒಟ್ಟಾರೆ 126 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ 40 ಕ್ಷೇತ್ರಗಳಲ್ಲಿ ಚಹಾ ತೋಟದ ಕೆಲಸಗಾರರ ಮತಗಳು ನಿರ್ಣಾಯಕವಾಗಿವೆ.

ಮಾತೃಭಾಷೆಯ ವೈದ್ಯಕೀಯ ಕಾಲೇಜು: ಪ್ರತಿ ರಾಜ್ಯದಲ್ಲೂ ಮಾತೃ ಭಾಷೆಯಲ್ಲೇ ಶಿಕ್ಷಣವನ್ನು ನೀಡುವ ಕನಿಷ್ಠ ಒಂದಾದರೂ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜನ್ನು ಆರಂಭಿಸಬೇಕು ಎಂಬುದು ನನ್ನ ಕನಸು. ಆರ್ಥಿಕವಾಗಿ ಹಿಂದುಳಿದವರ ಮನೆಗಳಲ್ಲೂ ಪ್ರತಿಭಾವಂತರಿಗೆ ಕೊರತೆ ಇಲ್ಲ. ಅಸ್ಸಾಂನಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಇಂಥ ಒಂದೊಂದು ಕಾಲೇಜು ಆರಂಭಿಸುವ ಕೆಲಸಕ್ಕೆ ಚಾಲನೆ ಲಭಿಸಲಿದೆ’ ಎಂದು ಮೋದಿ ಹೇಳಿದರು.

‘ಮಮತೆಯಲ್ಲ ನಿರ್ಮಮತೆ’

ಹಲ್ದಿಯಾ (ಪಶ್ಚಿಮ ಬಂಗಾಳ): ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಮೋದಿ, ‘ರಾಜ್ಯದ ಜನರು ಮುಖ್ಯಮಂತ್ರಿಯಿಂದ ‘ಮಮತೆ’ ಬಯಸಿದ್ದರು. ಆದರೆ ಅವರಿಗೆ ‘ನಿರ್ಮಮತೆ’ ಲಭಿಸಿದೆ ಎಂದರು.

ರಾಜ್ಯದಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿಯಲ್ಲಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು.

‘ಕಳೆದ ಹತ್ತು ವರ್ಷಗಳಲ್ಲಿ ಈ ಸರ್ಕಾರ ಅನೇಕ ತಪ್ಪುಗಳನ್ನು ಮಾಡಿದೆ. ಭ್ರಷ್ಟಾಚಾರವನ್ನೇ ಮುಖ್ಯವಾಗಿಸಿದೆ, ಅಧಿಕಾರವನ್ನು ದುರ್ಬಳಕೆ ಮಾಡಿದೆ. ಟಿಎಂಸಿ ನೇತೃತ್ವದ ಸರ್ಕಾರವು ಹಿಂದಿನ ಎಡಪಂಥೀಯ ಸರ್ಕಾರದ ಮರುಹುಟ್ಟು ಅಷ್ಟೇ ಆಗಿದೆ. ಆ ಕಾರಣಕ್ಕಾಗಿಯೇ ಈ ಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರವನ್ನು ಜನರು ಮಾಡಿದ್ದಾರೆ ಎಂದರು.

‘ಭಾರತ ಮಾತಾ ಕಿ ಜೈ ಘೋಷಣೆ ಕೂಗಿದರೆ ಅವರು (ಮಮತಾ ಬ್ಯಾನರ್ಜಿ)ಸಿಟ್ಟಾಗುತ್ತಾರೆ. ನಿಮ್ಮ ಹಕ್ಕುಗಳನ್ನು ಕೇಳಿದರೂ ಅವರಿಗೆ ಸಿಟ್ಟು ಬರುತ್ತದೆ. ಆದರೆ, ದೇಶದ ವಿರುದ್ಧ ಸಂಚು ಮಾಡುವವರ ಬಗ್ಗೆ ಮಾತ್ರ ಯಾಕೆ ಮೌನವಾಗಿರುತ್ತಾರೆ’ ಎಂದು ಮೋದಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.