ADVERTISEMENT

ಅರಣ್ಯ ತಿದ್ದುಪಡಿ ಮಸೂದೆ: ಕಾಂಗ್ರೆಸ್‌ನಿಂದ ಜನರಲ್ಲಿ ಸಂಶಯ ಬಿತ್ತುವ ಕಾರ್ಯ-ಯಾದವ್

ಪಿಟಿಐ
Published 1 ಏಪ್ರಿಲ್ 2023, 12:43 IST
Last Updated 1 ಏಪ್ರಿಲ್ 2023, 12:43 IST
ಭೂಪೇಂದರ್ ಯಾದವ್
ಭೂಪೇಂದರ್ ಯಾದವ್   

ನವದೆಹಲಿ: ‘ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2023’ ಅನ್ನು ಸಂಸದೀಯ ಜಂಟಿ ಸಮಿತಿಗೆ ಒಪ್ಪಿಸುವ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿರುವುದನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಶನಿವಾರ ಖಂಡಿಸಿದ್ದಾರೆ.

‘ಪರಾಮರ್ಶೆಗಾಗಿ ಮಸೂದೆಯೊಂದನ್ನು ಜಂಟಿ ಸಮಿತಿಗೆ ವಹಿಸುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಆ ಮೂಲಕ, ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಹಾಗೂ ಪ್ರಕ್ರಿಯೆಗಳ ಕುರಿತು ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿಸುವ ಅಸಹ್ಯಕರ ಕಾರ್ಯದಲ್ಲಿ ತೊಡಗಿದೆ’ ಎಂದು ಅವರು ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಯಾವ ಮಸೂದೆಗಳನ್ನು ಜಂಟಿ ಸಮಿತಿಗಳಿಗೆ ಒಪ್ಪಿಸಲಾಗಿತ್ತು ಎಂಬ ಪಟ್ಟಿ ಕುರಿತ ವಿಡಿಯೊಯೊಂದನ್ನು ಅವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಜನರಲ್ಲಿ ಸಂಶಯ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಪಕ್ಷವು ಭಾರತದಲ್ಲಿ ಹಾಗೂ ವಿದೇಶದಲ್ಲಿಯೂ ಮಾಡುತ್ತಿದೆ. ಇದು ಅಪಾಯಕರ ನಡೆ. ಇದನ್ನು ಕಾಂಗ್ರೆಸ್‌ ಕೂಡಲೇ ನಿಲ್ಲಿಸಬೇಕು’ ಎಂದಿದ್ದಾರೆ.

‘ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆಯನ್ನು ಜಂಟಿ ಸಮಿತಿಗೆ ಒಪ್ಪಿಸುವ ನಿರ್ಧಾರವು ಸಂಸದೀಯ ಪ್ರಕ್ರಿಯೆಯನ್ನು ಅಪಮೌಲ್ಯಗೊಳಿಸುವ ಹಾಗೂ ಅದಕ್ಕೆ ಮಸಿ ಬಳಿಯುವ ಪ್ರಯತ್ನ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ಹೇಳುತ್ತಾರೆ. ಆದರೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಲಾದ ಮಸೂದೆಗಳ ಪೈಕಿ ಎಷ್ಟು ಮಸೂದೆಗಳನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಜಂಟಿ ಸಮಿತಿಗಳಿಗೆ ಕಳುಹಿಸಿತ್ತು ಎಂಬ ಬಗ್ಗೆ ಅವರು ಅಧ್ಯಯನ ನಡೆಸಲಿ’ ಎಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.