ADVERTISEMENT

ಅರಣ್ಯ ಹಕ್ಕಿಲ್ಲದವರ ತೆರವು: ‘ಸುಪ್ರೀಂ’ ನಿರ್ದೇಶನ

ಜುಲೈ 24ರೊಳಗೆ ತೆರವು ಮಾಡುವಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 20:22 IST
Last Updated 21 ಫೆಬ್ರುವರಿ 2019, 20:22 IST
   

ನವದೆಹಲಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳು ಎಂದು ಹಕ್ಕು ಮಂಡಿಸಿ ಅದು ತಿರಸ್ಕೃತವಾಗಿರುವ ಎಲ್ಲರನ್ನೂ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಇದೇ 13ರಂದು ಆದೇಶ ನೀಡಿದೆ.

ಕರ್ನಾಟಕ ಸೇರಿ ಒಟ್ಟು 21 ರಾಜ್ಯಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಪಂಗಡ (ಆದಿವಾಸಿ) ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳು ವರ್ಗಗಳ ಅಡಿಯಲ್ಲಿ ಅರಣ್ಯದಲ್ಲಿ ವಾಸಿಸುವ ಹಕ್ಕಿಗಾಗಿ ಸಲ್ಲಿಸಿದ ಅರ್ಜಿಗಳು ತಿರಸ್ಕೃತವಾಗಿವೆ. ಇವರೆಲ್ಲರನ್ನೂ ಕಾಡು ಪ್ರದೇಶದಿಂದ ತೆರವುಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ನವೀನ್‌ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠ ಆದೇಶಿಸಿದೆ.

ಅರಣ್ಯ ನಿವಾಸಿಗಳಿಗೆ ‘ಪಾರಂಪರಿಕವಾಗಿ ಆಗಿರುವ ಅನ್ಯಾಯ’ವನ್ನು ಸರಿಪಡಿಸಲು ಅರಣ್ಯ ಹಕ್ಕುಗಳ ಕಾಯ್ದೆ 2006 ಅನ್ನು ಅಂಗೀಕರಿಸಲಾಗಿತ್ತು. ಈ ಕಾಯ್ದೆಯನ್ನು ಪ್ರಶ್ನಿಸಿ ಬೆಂಗಳೂರಿನ ‘ವೈಲ್ಡ್‌ ಲೈಫ್‌ ಫಸ್ಟ್‌’ ಮತ್ತು ಇತರ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತರಾದವರನ್ನು ಕಾಡಿನಿಂದ ಹೊರಗೆ ಕಳುಹಿಸಲೂ ಅರ್ಜಿ ಸಲ್ಲಿಕೆಯಾಗಿತ್ತು.

ADVERTISEMENT

ಅರ್ಜಿ ತಿರಸ್ಕೃತರಾದವರನ್ನು ಯಾಕೆತೆರವು ಮಾಡಿಲ್ಲ ಎಂದು ಪೀಠವು ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಜುಲೈ 24ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಅರ್ಜಿ ತಿರಸ್ಕೃತರಾದ ಎಲ್ಲರನ್ನೂ ಅದರೊಳಗೆ ಒಕ್ಕಲೆಬ್ಬಿಸುವಂತೆ ಪೀಠ ಸೂಚಿಸಿದೆ.

‘ಅರ್ಜಿ ತಿರಸ್ಕೃತರಾದವರನ್ನು ಮುಂದಿನ ವಿಚಾರಣೆಗೆ ಮೊದಲು ತೆರವುಮಾಡಿಸುವುದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಹೊಣೆ. ತೆರವು ಮಾಡುವಲ್ಲಿ ವಿಫಲರಾದರೆ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಲಿದೆ’ ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.

ಕಟ್ಟುನಿಟ್ಟು ಸೂಚನೆ

* ಜುಲೈ 12ರೊಳಗೆ ಅಗತ್ಯ ಮಾಹಿತಿ ಇರುವ ಪ್ರಮಾಣಪತ್ರ ಸಲ್ಲಿಕೆಗೆ ರಾಜ್ಯಗಳಿಗೆ ನಿರ್ದೇಶನ

* ಪರಿಶೀಲನೆ, ಮರುಪರಿಶೀಲನೆ ಪ್ರಕ್ರಿಯೆ ಬಾಕಿ ಇದ್ದಲ್ಲಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಬೇಕು. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು

* ಭಾರತೀಯ ಅರಣ್ಯ ಸರ್ವೇಕ್ಷಣೆ (ಎಫ್‌ಎಸ್‌ಐ) ಸಂಸ್ಥೆಯು ಒತ್ತುವರಿ ಸ್ಥಿತಿ ಬಗ್ಗೆ ಉಪಗ್ರಹ ಸಮೀಕ್ಷೆ ನಡೆಸಬೇಕು. ತೆರವಿನ ಬಳಿಕದ ಸ್ಥಿತಿಯ ಸಮೀಕ್ಷೆಯನ್ನೂ ಸಾಧ್ಯವಾದಷ್ಟು ಮಟ್ಟಿಗೆ ಮಾಡಬೇಕು

ಹಕ್ಕು ಪ್ರತಿಪಾದನೆ ನಿಯಮ

* ಪರಿಶಿಷ್ಟ ಪಂಗಡಕ್ಕೆ (ಆದಿವಾಸಿ) ಸೇರಿದವರು 2005ರ ಡಿಸೆಂಬರ್‌ 13ರವರೆಗೆ ಅರಣ್ಯದಲ್ಲಿ ವಾಸಿಸುತ್ತಿರಬೇಕು

* ಇತರ ಪಾರಂಪರಿಕ ಅರಣ್ಯವಾಸಿಗಳು ನಿರಂತರವಾಗಿ 75 ವರ್ಷ ಅರಣ್ಯದಲ್ಲಿ ವಾಸಿಸುತ್ತಿರುವುದರ ದಾಖಲೆ ಸಲ್ಲಿಸಬೇಕು

ರಾಜ್ಯದಲ್ಲಿ ಒಂದೂ ಮುಕ್ಕಾಲು ಲಕ್ಷ

ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯವಾಸಿ ಎಂಬ ಎರಡೂ ವರ್ಗಗಳಲ್ಲಿ ಅರಣ್ಯ ಹಕ್ಕುಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಪರಿಶಿಷ್ಟ ಪಂಗಡ ವರ್ಗದಲ್ಲಿ 48,432 ಅರ್ಜಿಗಳು ಸಲ್ಲಿಕೆಯಾಗಿವೆ. 35,521 ಅರ್ಜಿಗಳು ತಿರಸ್ಕೃತವಾಗಿವೆ. ಇತರ ಪಾರಂಪರಿಕ ಅರಣ್ಯವಾಸಿ ವಿಭಾಗದಲ್ಲಿ 2,27,014 ಅರ್ಜಿ ಸಲ್ಲಿಕೆಯಾಗಿದ್ದು 1,41,019 ಅರ್ಜಿಗಳು ತಿರಸ್ಕೃತವಾಗಿವೆ.

**

ನಿಜವಾದ ಅರಣ್ಯವಾಸಿಗಳಿಗೆ ಈ ಆದೇಶದಿಂದ ಅನ್ಯಾಯವಾಗುವುದಿಲ್ಲ
–ಪ್ರವೀಣ್‌ ಭಾರ್ಗವ್‌, ವೈಲ್ಡ್‌ಲೈಫ್‌ ಫಸ್ಟ್‌ನ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.