ADVERTISEMENT

ಶವ ಸಂರಕ್ಷಣೆಗೆ ಬಳಸುವ ‘ಫಾರ್ಮಲಿನ್‌’ ದ್ರಾವಣ ಮೀನುಗಳಿಗೆ ‘ಇಂಜೆಕ್ಟ್‌’

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 6:41 IST
Last Updated 29 ಜೂನ್ 2018, 6:41 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ದಿಮಾಪುರ:ಮೀನುಗಳ ದೇಹದಲ್ಲಿ ‘ಫಾರ್ಮಲಿನ್‌’ ವಿಷಕಾರಿ ದ್ರಾವಣ ಇರುವುದು ನಾಗಾಲ್ಯಾಂಡ್‌ನಲ್ಲಿ ದಿಮಾಪುರ ಸೇರಿದಂತೆ ಹಲವೆಡೆ ಕಂಡುಬಂದಿದೆ.

ಮೀನುಗಳ ಮಾರಾಟ ಮಳಿಗೆಗಳಿಂದ 913 ಕೆ.ಜಿ ಮೀನುಗಳನ್ನು ಆರೋಗ್ಯ ಇಲಾಖೆ ವಶಕ್ಕೆ ಪಡೆದು ತಪಾಸಣೆ ನಡೆಸಿದೆ. ಆರು ಕಡೆ ಸಂಗ್ರಹಿಸಿದ್ದ ಐದು ತಳಿಯ ಮೀನುಗಳ ನಾಲ್ಕು ಮಾದರಿಗಳಲ್ಲಿ ‘ಫಾರ್ಮಲಿನ್‌’ ಇರುವುದು ಪತ್ತೆಯಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ತಪಾಸಣೆ ವೇಳೆ ಮೀನುಗಳಿಗೆ ವಿಷಕಾರಿ ‘ಫಾರ್ಮಲಿನ್‌’ ರಾಸಾಯನಿಕ ದ್ರಾವಣವನ್ನು ಚುಚ್ಚುಮದ್ದು(ಇಂಜೆಕ್ಟ್‌) ಮೂಲಕ ನೀಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ADVERTISEMENT

‘ಫಾರ್ಮಲಿನ್‌’ ದ್ರಾವಣವನ್ನು ಸಾಮಾನ್ಯವಾಗಿ ಮೃತ ದೇಹಗಳ ಸಂರಕ್ಷಣೆಗೆ ಬಳಸಲಾಗುತ್ತದೆ. ಜತೆಗೆ, ಸತ್ತ ಮೀನುಗಳ ಸಂರಕ್ಷಣೆಗೂ ಬಳಸಲಾಗುತ್ತದೆ.

ಆದರೆ, ಇಲ್ಲಿ ಮಾರಾಟ ಮಾಡುವ ಮೀನುಗಳು ಹೆಚ್ಚು ಕಾಲ ಕೆಡದಂತೆ ಇರಿಸಲು ಮೀನುಗಳಿಗೆ ‘ಫಾರ್ಮಲಿನ್‌’ ದ್ರಾವಣವನ್ನು ‘ಇಂಜೆಕ್ಟ್‌’ ಮಾಡಲಾಗಿದೆ. ಇಂತಹದ್ದೊಂದು ಅಪಾಯಕಾರಿ ಮತ್ತು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಆರೋಗ್ಯ ಮತ್ತು ‍ಪುರಸಭೆಗಳ ಅಧಿಕಾರಿಗಳು ದಿಮಾಪುರ ಹಾಗೂ ಚುಮುಮೆಡಿಯ ಮೀನು ಮಾರುಕಟ್ಟೆಯ ಸಂಗ್ರಹಗಾರಗಳಲ್ಲಿ ವಿವಿಧ ಮೀನುಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದಾರೆ ಎಂದು ನಾಗಲ್ಯಾಂಡ್‌ ಪೋಸ್ಟ್‌ ವರದಿ ಮಾಡಿದೆ.

ಸ್ಥಳೀಯರ ಸಮ್ಮುಖದಲ್ಲೇ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಸಂಶಯ ಕಂಡುಬಂದ ಮಾರುಕಟ್ಟೆಗಳಲ್ಲಿ ಆದೇಶ ನೀಡುವವರೆಗೂ ಮೀನುಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.