ADVERTISEMENT

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ನಿಧನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 15:55 IST
Last Updated 23 ನವೆಂಬರ್ 2020, 15:55 IST
ತರುಣ್ ಗೊಗೊಯಿ
ತರುಣ್ ಗೊಗೊಯಿ   

ಗುವಾಹಟಿ: ‘ವಿಭಿನ್ನ ರಾಜಕಾರಣಿ’ ಎಂದೇ ಕರೆಯಲ್ಪಡುತ್ತಿದ್ದ ಹಿರಿಯ ಕಾಂಗ್ರೆಸ್‌ ನಾಯಕ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯಿ ಅವರು ಸೋಮವಾರ ಸಂಜೆ ನಿಧನರಾದರು.

ಗೊಗೊಯಿ ಅವರು, ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿ, ಮತ್ತೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಪತ್ನಿ ಡಾಲಿ, ಮಗಳು ಚಂದ್ರಿಮಾ, ಮಗ, ಸಂಸದ ಗೌರವ್‌ ಅವರನ್ನು ಗೊಗೊಯಿ ಅಗಲಿದ್ದಾರೆ. 2001ರಿಂದ 2016ರವರೆಗೆ ಮೂರು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಗೊಗೊಯಿ, ಗುವಾಹಟಿ ವೈದ್ಯಕೀಯ ಕಾಲೇಜಿನಲ್ಲಿ ಸಂಜೆ 5.34ಕ್ಕೆ ಮೃತಪಟ್ಟರು ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಕೋವಿಡ್‌–19 ದೃಢಪಟ್ಟ ಕಾರಣ ಆ.26ರಂದು ಗೊಗೊಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದರಲ್ಲಿ ಅವರು ಚೇತರಿಸಿಕೊಂಡ ಕಾರಣ ಮನೆಗೆ ಮರಳಿದ್ದರು. ಆದರೆ ಮತ್ತೆ ಅನಾರೋಗ್ಯದ ಕಾರಣದಿಂದ ನ.2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಹುಅಂಗಾಗ ವೈಫಲ್ಯದಿಂದಾಗಿ ಅವರ ಆರೋಗ್ಯ ಸ್ಥಿತಿ ನ.21ರಂದು ಮತ್ತಷ್ಟು ಹದಗೆಟ್ಟಿತ್ತು. ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ, ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಭಾನುವಾರ ಅವರಿಗೆ ಡಯಾಲಿಸಿಸ್‌ ಮಾಡಲಾಗಿತ್ತು. ನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ADVERTISEMENT

1934ರಲ್ಲಿ ಶಿವಸಾಗರ್ ಜಿಲ್ಲೆಯಲ್ಲಿ ಜನಿಸಿದ ಗೊಗೊಯಿ, 2001ರಿಂದ ಟಿಟಾಬೊರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಆರು ಬಾರಿ ಸಂಸತ್‌ ಪ್ರವೇಶಿಸಿದ್ದರು ಹಾಗೂ ಎರಡು ಬಾರಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

‘ಅವರೊಬ್ಬ ವಿಭಿನ್ನ ರಾಜಕಾರಣಿ’

ಗೊಗೊಯಿ ಅವರ ನಿಧನ ದಶಕಗಳ ರಾಜಕೀಯ ವೃತ್ತಿಯನ್ನು ಕೊನೆಗೊಳಿಸಿದೆ. ಆದರೆ ಅವರ ರಾಜಕೀಯ ಪರಂಪರೆ ಇನ್ನೂ ಜೀವಂತವಾಗಿದೆ. ಇದನ್ನು ಪ್ರಸ್ತುತ ಇರುವ ಎಲ್ಲ ರಾಜಕಾರಣಗಳು ಪಾಲಿಸಬೇಕಾಗಿದೆ ಎನ್ನುವ ಒಮ್ಮತದ ಅಭಿಪ್ರಾಯವನ್ನು ಪಕ್ಷಾತೀತವಾಗಿ ರಾಜಕಾರಣಿಗಳು ಹೇಳುತ್ತಾರೆ.

‘ಅವರೊಬ್ಬ ವಿಭಿನ್ನ ರಾಜಕಾರಣಿ. ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ಜೊತೆಗೂ ಬೆರೆಯುತ್ತಿದ್ದ ಅವರ ಗುಣವನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಕೋಮು ಸಾಮರಸ್ಯವನ್ನು ಉತ್ತೇಜಿಸುವ ಅವರ ಸಾಮರ್ಥ್ಯವನ್ನು, ಅಸ್ಸಾಂನಂಥ ರಾಜ್ಯ ಕಳೆದುಕೊಳ್ಳಲಿದೆ’ ಎಂದು ಗುವಾಹಟಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಖಿಲ್‌ ರಂಜನ್‌ ದತ್ತಾ ತಿಳಿಸಿದರು.

ಅಸ್ಸಾಂನಲ್ಲಿ ಶಾಂತಿಯನ್ನು ತರಲು ಪ್ರಮುಖ ಪಾತ್ರ ವಹಿಸಿದ್ದ ಗೊಗೊಯಿ, ಉಲ್ಫಾ, ಕೆಎಲ್‌ಎನ್‌ಎಲ್‌ಎಫ್‌, ಡಿಎಚ್‌ಡಿ ಸೇರಿದಂತೆ ಇತರೆ ತೀವ್ರವಾದಿ ಸಂಘಟನೆಗಳ ಜೊತೆ ಸಂಧಾನ ಸಭೆ ನಡೆಸಿದ್ದರು.

ರಾಜಕೀಯ ಹಾದಿ

1971ರಲ್ಲಿ ಮೊದಲ ಬಾರಿಗೆ ಜೋರಟ್‌ನಿಂದ ಲೋಕಸಭೆಗೆ ಆಯ್ಕೆ

1976–ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ(ಎಐಸಿಸಿ) ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ

1985–90: ರಾಜೀವ್‌ ಗಾಂಧಿ ಅವರ ಆಡಳಿತದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ

1991–96: ಪ್ರಧಾನಿ ಪಿವಿ.ನರಸಿಂಹ ರಾವ್‌ ಅವರ ಸಚಿವ ಸಂಪುಟದಲ್ಲಿ ಆಹಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.